ಹಾವೇರಿ: ಲೋಕಸಭೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಜತೆಗೆ ಬೆಟ್ಟಿಂಗ್ ಕೂಡ ವ್ಯಾಪಕವಾಗಿ ತೆರೆಮೆರೆಯಲ್ಲಿ ತಲೆ ಎತ್ತಿದೆ.
ಪಾನ್ ಅಂಗಡಿ, ಹೋಟೆಲ್, ಅಂಗಡಿ, ಕಚೇರಿ ಎನ್ನದೇ ಎಲ್ಲೆಡೆ ‘ನಿಮ್ಮ ಪ್ರಕಾರ ಈ ಸಲ ಯಾರು ಆರಿಸಿ ಬರಬಹುದ್ರಿ’ ಎಂಬ ಚರ್ಚೆ ನಡೆಯುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆ ಜನಸಾಮಾನ್ಯರಿಂದ ಹಿಡಿದು ಮುಖಂಡರ ವರೆಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕ್ಷೇತ್ರದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಈ ಚರ್ಚೆಯಲ್ಲಿ ಕೆಲವರು ತಮ್ಮ ಗೆಲುವಿನ ಅಭ್ಯರ್ಥಿ ಮತ್ತು ಪಕ್ಷದ ಬಗ್ಗೆ ನೀಡುವ ಸಮರ್ಥನೆಯ ಅಂಶಗಳು ಕುತೂಹಲಕಾರಿಯಾಗಿವೆ.
ಹೀಗಿದೆ ಸಮರ್ಥನೆ: ‘ಈ ಸಲ ಮೋದಿ ಅಲೆ ಇದೆ. ಸರ್ಜಿಕಲ್ ಸ್ಟ್ರೆ ೖಕ್ ಮಾಡಿದ್ರು ನೋಡ್ರಿ ಆಗ ಮೋದಿ ಅಲೆ ಹೆಚ್ಚಾಯ್ತು. ಯುವಕರೆಲ್ಲ ಮೋದಿ ಅಭಿಮಾನಿಗಳಾದರು. ಹೀಗಾಗಿ ಬಿಜೆಪಿಗೆ ಮತ ಜಾಸ್ತಿ ಬಿದ್ದಿದೆ. ಹಾಗಾಗಿ ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯೇ ಆಯ್ಕೆಯಾಗುತ್ತಾರೆ ಎಂದು ಬಿಜೆಪಿ ಪರ ಒಲವು ಇದ್ದವರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇತ್ತ ಕಾಂಗ್ರೆಸ್ ಪರ ಒಲವು ಇದ್ದವರು ‘ಈ ಸಲ ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಆಯ್ಕೆ ಖಚಿತ. ಮೋದಿ ಭಾಷಣ ಬಿಟ್ಟು ಏನೂ ಕೆಲಸ ಮಾಡಿಲ್ಲ. 15ಲಕ್ಷ ಬಡವರ ಖಾತೆಗೆ ಹಾಕ್ತೇನೆ ಅಂದ್ರು..ಹಾಕಿಲ್ಲ. ನೋಟು ಬ್ಯಾನ್ ಮಾಡಿ ಮಧ್ಯಮ ವರ್ಗದವರಿಗೆ ತೊಂದರೆ ಕೊಟ್ಟರು. ಎಲ್ಲದಕ್ಕೂ ಟ್ಯಾಕ್ಸ್ ಹಾಕಿ ಜನರ ವಿರೋಧ ಕಟ್ಟಿಕೊಂಡ್ರು. ಕಾಂಗ್ರೆಸ್ ಈ ಬಾರಿ ಹಿಂದೂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದರಿಂದ ಒಳ್ಳೆದಾಗಿದೆ. ಜನ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹೀಗಾಗಿ ಡಿ.ಆರ್. ಪಾಟೀಲ ಗೆದ್ದೆ ಗೆಲ್ತಾರೆ’ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
Advertisement
ಕ್ಷೇತ್ರದ ಓಣಿ ಓಣಿಗಳಲ್ಲಿ ಜನ ಗುಂಪು ಗುಂಪಾಗಿ ನಿಂತು, ಕುಳಿತು ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಯಾರು ಕಂಡರೂ ‘ಯಾರು ಗೆಲ್ತಾರ್ರಿ ಈ ಸಲ’, ‘ಈ ಸಲ ರಿಸಲ್r ಏನಾಗತೈತ್ರಿ’ ಎಂಬ ಮಾತಿನೊಂದಿಗೆ ಜನ ಚರ್ಚೆಗಿಳಿಯುತ್ತಿದ್ದಾರೆ. ಈ ಚರ್ಚೆ ಮುಂದುವರೆದು ‘ನಾನು ಹೇಳಿದ್ದೇ ಸತ್ಯ ಏನು ಬೆಟ್ಟಿಂಗ್’ ಎಂದು ಪ್ರಶ್ನಿಸುವ ಮೂಲಕ ಬೆಟ್ಟಿಂಗ್ ಹವಾ ಶುರುವಾಗಿದೆ.
Related Articles
Advertisement
ಏನೂ ಹೇಳ್ಳೋಕಾಗಲ್ಲ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಗೆಲ್ಲುವುದಾಗಿ ಸಮರ್ಥಿಸಿಕೊಳ್ಳುವವರ ಮಧ್ಯೆ ‘ಈ ಬಾರಿ ಈಗಲೇ ಏನೂ ಹೇಳ್ಳೋಕಾಗಲ್ಲ. ಬಹಳ ತುರಿಸಿನ ಸ್ಪರ್ಧೆ ನಡೆದಿದೆ’ ಎಂಬುವರ ಸಂಖ್ಯೆಯೂ ಅಧಿಕವಾಗಿದೆ.
ಎರಡೂ ಪಕ್ಷಗಳ ಅಭ್ಯರ್ಥಿಗಳಿಗೂ ಒಂದೊಂದು ಕಡೆಗಳಲ್ಲಿ ಒಂದೊಂದು ಅಂಶ ಧನಾತ್ಮಕವಾಗಿ ಕಂಡು ಬರುತ್ತಿದೆ. ಹೀಗಾಗಿ ಸ್ಪಷ್ಟವಾಗಿ ಗೆಲವು ಹೇಳುವಷ್ಟು ನಿಖರ ಚಿತ್ರಣ ಈ ಬಾರಿ ಮತದಾರ ಬಿಟ್ಟು ಕೊಟ್ಟಿಲ್ಲ. ಯಾರಾದರೂ ಗೆಲ್ಲಬಹುದು ಆದರೆ, ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ ಎಂಬ ವಾದ ಹಲವರದ್ದಾಗಿದೆ.
ಬೆಟ್ಟಿಂಗ್ ಶುರು: ರಾಜಕೀಯ ಮುಖಂಡರು, ಕಾರ್ಯಕರ್ತರು, ಜನಸಾಮಾನ್ಯರು, ಉದ್ಯೋಗಿಗಳು, ಅಧಿಕಾರಿಗಳು, ನೌಕರರು, ವ್ಯಾಪಾರಸ್ಥರು, ಕೂಲಿಕಾರರು ಹೀಗೆ ಎಲ್ಲ ವರ್ಗದ ಜನರಲ್ಲೂ ಚರ್ಚೆಗೆ ಗ್ರಾಸವಾಗಿರುವ ಈ ಚುನಾವಣೆ ಈಗ ಬೆಟ್ಟಿಂಗ್‌ಗೆ ಇಂಬು ನೀಡಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಕೆಲವರು ಇದನ್ನು ದಂಧೆಯನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಐಪಿಎಲ್ ಕ್ರಿಕೆಟ್ಗಿಂತ ಒಂದು ಹೆಜ್ಜೆ ಮುಂದೆ ಎನ್ನುವ ರೀತಿಯಲ್ಲಿ ಬೆಟ್ಟಿಂಗ್ ಗ್ರಾಮದ ಕಟ್ಟೆಯಿಂದ ಹಿಡಿದು ಬಾರ್‌ಗಳ ಟೇಬಲ್ಗಳವರೆಗೆ ವ್ಯಾಪಕವಾಗಿ ನಡೆಯುತ್ತಿದೆ. ಕಿರಾಣಿ ಅಂಗಡಿ, ಪಾನ್ ಅಂಗಡಿ, ಹೋಟೆಲ್, ಬಾರ್‌ಗಳು ಬೆಟ್ಟಿಂಗ್‌ನ ಪ್ರಮುಖ ಅಡ್ಡೆಗಳಾಗಿ ಪರಿಣಮಿಸಿವೆ. ಬೆಟ್ಟಿಂಗ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಉದ್ಯಮಿಗಳು, ಗುತ್ತಿಗೆದಾರರು ಸಹ ಪಾಲ್ಗೊಳ್ಳುತ್ತಿದ್ದು ಬೆಟ್ಟಿಂಗ್‌ಗೆ ಭಾರೀ ಪ್ರಮಾಣದ ನಗದು ಹಣ, ಕೃಷಿ ಜಮೀನು, ಸೈಟು, ಚಿನ್ನ, ವಾಹನ ಇಡಲಾಗುತ್ತಿದೆ. ಮತ ಎಣಿಕೆ ಮೇ 23ರಂದು ನಡೆಯುವುದರಿಂದ ಬೆಟ್ಟಿಂಗ್ ದಂಧೆಗೆ ಭಾರಿ ಸಮಯಾವಕಾಶ ಸಿಕ್ಕಂತಾಗಿದೆ.
ಎಚ್.ಕೆ. ನಟರಾಜ