Advertisement

ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನ ಬುನಾದಿ

04:27 PM Jan 26, 2018 | |

ರಾಯಚೂರು: ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಬಲವರ್ಧನೆಗೆ ಮತದಾನದ ಸೂತ್ರ ಬುನಾದಿಯಾಗಿದೆ. ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗಾಗಿ ಎಂಬ ದೇಶದ ಆಡಳಿತ ವ್ಯವಸ್ಥೆಗೆ ಮತದಾನ ಸಹಕಾರಿಯಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಜಿ. ಅಭಿರಾಮ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಭಾರತ ಚುನಾವಣಾ ಆಯೋಗ ಜಿಲ್ಲಾ ಚುನಾವಣಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1950ರ ಜನವರಿ 25ರಂದು ದೇಶದಲ್ಲಿ ಚುನಾವಣಾ ಆಯೋಗವು ಅಸ್ತಿತ್ವಕ್ಕೆ ಬಂದಿದೆ. ಕಳೆದ ಒಂದು ದಶಕದಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಮಾಡಲಾಗುತ್ತಿದೆ. ಪ್ರಪಂಚದಲ್ಲಿರುವ ಅನೇಕ ಅಭಿವೃದ್ಧಿ ದೇಶಗಳಲ್ಲಿಯೂ ಚುನಾವಣಾ ಪದ್ಧತಿ ಹೊಂದಿಲ್ಲ. ಭಾರತ ದೇಶವು ಹಲವು ವೈವಿಧ್ಯತೆಯಿಂದ ಕೂಡಿದ್ದರೂ ಪ್ರಜೆಗಳಿಗೆ ಮತದಾನ ಹಕ್ಕನ್ನು ನೀಡಿದೆ ಎಂದು ಹೇಳಿದರು.ದೇಶದ ಪ್ರಜಾಪ್ರಭುತ್ವದ ನೆಲೆಯಲ್ಲಿ ಸಂವಿಧಾನ ಪ್ರತಿಯೊಬ್ಬ ಪ್ರಜೆಗೆ ಮತದಾನ ಹಕ್ಕನ್ನು ಕಲ್ಪಿಸಲಾಗಿದೆ. ಈ ವರ್ಷದಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಈ ನಿಟ್ಟಿನಲ್ಲಿ ಯುವಕರು ಮತದಾನ ಹಕ್ಕನ್ನು ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಮಾತನಾಡಿ, ಭಾರತ ಪ್ರಜಾತಂತ್ರ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸ್ಥಿರ ಹಾಗೂ ಶಾಂತಿಯುತ ರಾಷ್ಟ್ರವಾಗಿದೆ. ದೇಶದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದರಿಂದ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳು ಜನರ ಶ್ರೇಯಸ್ಸಿಗಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ನೀತಿ ನಿಯಮಗಳಡಿಯಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ, ಇತರ ದೇಶಗಳಲ್ಲಿ ಈ ವ್ಯವಸ್ಥೆಯನ್ನು ಹೊಂದಿಲ್ಲ. ದೇಶದ ಚುನಾವಣಾ ಪದ್ಧತಿಯು ಇತರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದರು.

ಜಗತ್ತಿನಲ್ಲಿಯೇ ಭಾರತದ ಚುನಾವಣಾ ಆಯೋಗ ಪ್ರಥಮ ಸ್ಥಾನದಲ್ಲಿದೆ. ಹಿಂದೆ ಮತದಾನ ಸಂದರ್ಭದಲ್ಲಿ ಆಗುತ್ತಿದ್ದ ಗೊಂದಲ ಮತ್ತು ಅನರ್ಹ ವ್ಯಕ್ತಿಗಳ ಮತದಾನ ತಡೆಯಲು ಇವಿಎಂ ಯಂತ್ರಗಳನ್ನು ಅಳವಡಿಸಿ ಶಿಸ್ತು ಮತ್ತು ಸುರಕ್ಷತೆಯ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪ್ರಮುಖ ಪಾತ್ರವಾಗಿದೆ. ಮತದಾನ ಹಕ್ಕು ಪಡೆಯಲು ನೋಂದಣಿ ಮಾಡಿಕೊಳ್ಳಬೇಕು ಎಂದರು. 

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಸುರೇಶಬಾಬು ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಭಿತ್ತಿ ಚಿತ್ರ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಚುನಾವಣಾ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿ ಕಾರಿಗಳಿಗೆ ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಗೊಂವಿಂದರೆಡ್ಡಿ, ಉಪ ವಿಭಾಗಾಧಿ ಕಾರಿ ಪೂಜಾರ ವೀರಮಲ್ಲಪ್ಪ, ಶಿಕ್ಷಣ ಇಲಾಖೆ ಉಪನಿರ್ದೇಶಕ ನಂದನೂರು, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಸಿ.ಟಿ. ಕಲ್ಲಯ್ಯ, ತಹಶೀಲ್ದಾರ್‌ ಶಿವಾನಂದ ಸಾಗರ, ಸಂತೋಷರಾಣಿ, ಶರಣಬಸವ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next