ಮಂಡ್ಯ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಮಳವಳ್ಳಿ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ಪುರ ಸಭೆಗಳಿಗೆ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯ ಆಯಾ ತಾಲ್ಲೂಕು ಕೇಂದ್ರದಲ್ಲಿ ಮೇ 31ರಂದು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ.
ಈ ಚುನಾವಣೆಯಲ್ಲಿ ಪ್ರತಿ ಮತಕೇಂದ್ರಕ್ಕೆ ಒಬ್ಬ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಸದರಿ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು.
ಒಣ ದಿನ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ರೀತ್ಯಾ ಚುನಾವಣೆ ನಡೆಯ ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಗಡಿಯಿಂದ 3 ಕಿ.ಮೀ. ಪರಿಧಿಯಲ್ಲಿ ಮೇ 28ರಂದು ಬೆಳಗ್ಗೆ 7 ಗಂಟೆಯಿಂದ ಮೇ 29 ರಂದು ಮಧ್ಯರಾತ್ರಿಯವರೆಗೆ ಒಣ ದಿನಗಳನ್ನು ಘೋಷಿಸಲಾಗಿದೆ.
ಮತ ಎಣಿಕೆ ನಡೆಯಲಿರುವ ಮೇ 31ರಂದು ಮೂರು ಪುರಸಭೆಗಳ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ರೆಸ್ಟೊರೆಂಟ್ ಕ್ಲಬ್ ಗಳಲ್ಲಿ ಮದ್ಯ ಮಾರಾಟ ವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮೇಲ್ಕಾಣಿಸಿದ ಅವಧಿಯಲ್ಲಿ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಮತ್ತು ಶೇಖರಣೆಯನ್ನು ನಿಷೇಧಿಸಿ ಪಾನ ನಿರೋಧ (ಒಣ) ದಿನವೆಂದು ಘೋಷಿಸಲಾಗಿದೆ.
ಸಭೆ-ಸಮಾರಂಭ ನಿಷೇಧ: ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ 41 ರಂತೆ ಹಾಗೂ ರಾಜ್ಯ ಚುನಾ ವಣಾ ಆಯೋಗದ ಮೇ 15ರ ಆದೇಶದ ರೀತ್ಯಾ ಚುನಾವಣೆ ನಡೆಯಲಿರುವ ಮೇಲ್ಕಂಡ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತದಾನದ ದಿನಾಂಕದಂದು ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಯೊಳಗೆ ಅಂದರೆ ಮೇ 27ರ ಬೆಳಗ್ಗೆ 7 ಗಂಟೆಯೊಳಗೆ ಬಹಿರಂಗ ಪ್ರಚಾರ ನಿಲ್ಲಿಸಲು ಆದೇಶಿಸಲಾಗಿದೆ. ಯಾವುದೇ ವ್ಯಕ್ತಿಯು ಮತದಾನ ನಡೆಯುವ ದಿನದಂದು ಆ ಮತ ಕೇಂದ್ರದೊಳಗೆ ಅಥವಾ ಅಲ್ಲಿಂದ ನೂರು ಗಜದೊಳಗಿನ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತ ಪ್ರಚಾರ ನಡೆಸುವಂತಿಲ್ಲ. ಯಾವುದೇ ನಿರ್ದಿಷ್ಟ ಅಭ್ಯರ್ಥಿಗೆ ಮತ ನೀಡದಿರುವಂತೆ ಮತದಾರರ ಮನವೊಲಿ ಸುವುದು, ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು (ಸರ್ಕಾರಿ ನೋಟೀಸನ್ನು ಹೊರತುಪಡಿಸಿ) ಪ್ರದರ್ಶಿಸುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡನೆಗೆ ಒಳಗಾಗಬೇ ಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಬೇಕಿರುವುದರಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬೆಂಬಲಕ್ಕೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನಿಂದ ಚುನಾವಣಾ ಪ್ರಚಾರಕ್ಕಾಗಿ ತಾರಾ ಪ್ರಚಾರಕರು ಮತ್ತು ಇತರೆ ವ್ಯಕ್ತಿಗಳು ಆಗಮಿಸಿದ್ದರೆ ಅಂತಹವರು ಮೇ 27ರ ಬೆಳಗ್ಗೆ 7 ಗಂಟೆಯೊಳಗೆ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಕಡ್ಡಾಯವಾಗಿ ಬಿಡುವಂತೆ ಸೂಚಿಸಲಾಗಿದೆ.
ಸಂತೆ ಜಾತ್ರೆ, ಉತ್ಸವ ನಿಷೇಧ: ಚುನಾವಣೆ ನಡೆಯುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಮೇ 29ರಂದು ನಡೆಯುವ ಎಲ್ಲಾ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ನಿಷೇಧಿಸಿದೆ.
ಮತ ಚಲಾಯಿಸಲು ಗುರುತಿನ ಚೀಟಿ: ಮತದಾರರು ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಗುರುತಿಗಾಗಿ ಹಾಜರು ಪಡಿಸುವುದು ಅಥವಾ ಅದರ ಬದಲು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಪಡಿತರ ಚೀಟಿ ಸೇರಿದಂತೆ 22 ದಾಖಲೆಗಳು ಹಾಗೂ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನೀಡಲಾಗಿರುವ ದಾಖಲೆಯನ್ನು ಆ ಕುಟುಂಬದ ಇನ್ನಿತರ ಸದಸ್ಯರ ಗುರುತಿಗಾಗಿ ಬಳಸಬಹುದು.