ಕಮಲಾಪುರ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ಜಿ.ಪಾಟೀಲ ಅವರನ್ನು ಅಧಿಕ ಮತಗಳಿಂದ ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ತಾಲೂಕಿನ ಸೊಂತ ಗ್ರಾಮದಲ್ಲಿ ಗುರುವಾರ ಬಿ.ಜಿ.ಪಾಟೀಲ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಪ್ರಧಾನಿ ಮೋದಿ ಅವರು ಬಡವರಿಗೆ ಉಚಿತ ಪಡಿತರ ಅಕ್ಕಿ ವಿತರಣೆಯನ್ನು 2022ರ ಮಾರ್ಚ್‌ವರೆಗೆ ವಿಸ್ತರಿಸಿದ್ದಾರೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ರಾಜ್ಯದಲ್ಲಿ ಕಳೆದ ಬಾರಿ ನಮ್ಮ ಸರ್ಕಾರ ಇರಲಿಲ್ಲ. ಆದರೂ, ಬಿ.ಜಿ.ಪಾಟೀಲ ಅವರು 800 ಮತಗಳಿಂದ ಜಯ ಸಾಧಿಸಿದ್ದರು. ಈಗ ರಾಜ್ಯದಲ್ಲಿ ನಮ್ಮ ಸರ್ಕಾರ ಇರುವುದಲ್ಲದೇ, ಜಿಲ್ಲೆಯಲ್ಲಿ ಐವರು ಶಾಸಕರು ಇದ್ದೇವೆ. ಸಂಸದರೂ ನಮ್ಮವರೇ ಆಗಿದ್ದಾರೆ. ಈ ಬಾರಿ ಬಿ.ಜಿ.ಪಾಟೀಲ ಎರಡು ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಬಿ.ಜಿ.ಪಾಟೀಲ ಮಾತನಾಡಿ, ಕಳೆದ ಅಧಿಕಾರಾವಧಿಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹರಿಸುವ ಕೆಲಸ ಮಾಡಿದ್ದೇನೆ. ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದೇನೆ. ಮತ್ತೊಮ್ಮೆ ಮತದಾರರು ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದರು.
ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಅಂಬರಾಯ ಅಷ್ಟಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಮಹಾಗಾಂವ್, ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಟಗಿ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟೆ, ಪ್ರಮುಖರಾದ ಸುಭಾಷ ಬಿರಾದಾರ, ಮಂಜುನಾಥ ರೆಡ್ಡಿ, ಸಿದ್ಧಣ್ಣ ಪಾಟೀಲ ದಮ್ಮೂರ, ಸಂಗಮೇಶ ನಾಗನಹಳ್ಳಿ, ಪ್ರವೀಣ, ಹರ್ಷವರ್ಧನ ಗುಗಳೆ, ದಿವ್ಯ ಹಾಗರಗಿ, ಅನಿಲ ಹಾಗೂ ಹತ್ತು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.