ಹಾಸನ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ.99.78 ಮತದಾನವಾಗಿದೆ. ಎಲ್ಲ 257 ಮತಗಟ್ಟೆಗಳಲ್ಲೂ ಶಾಂತಿಯುತವಾಗಿ ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಮತದಾನ ಬಿರುಸಾಗಿದ್ದು, 10 ಗಂಟೆ ವೇಳೆಗೆ ಶೇ. 10.70 ಮತದಾನವಾಗಿತ್ತು.
12 ಗಂಟೆ ವೇಳೆಗೆ ಶೇ.58.41 ಮತದಾನವಾದರೆ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.93.99 ಮತದಾನವಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಮತದಾರರು ಒಂದೇ ತಂಡವಾಗಿ ಬಂದು ಮತದಾನ ಮಾಡಿದ್ದು, ಬೆಳಗ್ಗೆ 11 ಗಂಟೆ ವೇಳೆಗೆ ಕೆಲವು ಮತಗಟ್ಟೆಗಳಲ್ಲಿ ಶೇ. 98 ಮತದಾನವಾಗಿತ್ತು.
ಹಾಸನ ತಾಲೂಕು ಸಾಲಗಾಮೆ ಮತಗಟ್ಟೆಯಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ 16 ಮತದಾರರ ಪೈಕಿ 15 ಮಂದಿ ಮತ ಚಲಾಯಿಸಿದ್ದರು. ಒಬ್ಬ ಮತದಾರರಿಗಾಗಿ ಮತಗಟ್ಟೆ ಅಧಿಕಾರಿಗಳು ಕಾದು ಕುಳಿತರು. ಕೆಲ ಮತಗಟ್ಟಗಳಲ್ಲಿ ಬೆಳಗ್ಗೆ 11.30ರ ವೇಳೆಗೆ ಶೇ. 100 ಮತದಾನವಾಗಿದ್ದರೂ ಚುನಾವಣಾ ನಿಯಮದ ಪ್ರಕಾರ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯಾಹ್ನ 4 ಗಂಟೆವರೆಗೂ ಮತಗಟ್ಟೆಯಲ್ಲೇ ಇರಬೇಕಾಯಿತು. ಏಜೆಂಟರ ಸಮ್ಮುಖದಲ್ಲಿ ಸೀಲ್ ಮಾಡಿಕೊಂಡು ಪೊಲೀಸ್ ಭದ್ರತೆಯಲ್ಲಿ ಡಿಮಸ್ಟರಿಂಗ್ ಕೇಂದ್ರದತ್ತ ಹೊರಟರು.
ಅಯಾಯ ತಾಲೂಕು ಕೇಂದ್ರಗಳ ಮಸ್ಟರಿಂಗ್ ಕೇಂದ್ರಕ್ಕೆ ಸಂಜೆ ವೇಳೆಗೆ ತಲಪಿದ ಮತಗಟ್ಟೆ ಅಧಿಕಾರಿಗಳು ಮುದ್ರೆಯಾದ ಮತಪೆಟ್ಟಿಗೆಗಳನ್ನು ತಾಲೂಕು ಚುನಾವಣಾಧಿಕಾರಿಗಳಿಗೆ ಒಪ್ಪಿಸಿದರು. ಆನಂತರ ತಾಲೂಕು ಚುನಾವಣಾಧಿಕಾರಿಗಳು ಮತ ಎಣಿಕೆ ಕೇಂದ್ರ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಮತಪೆಟ್ಟಿಗೆಗಳನ್ನು ರವಾನಿಸಿದರು. ಜಿಲ್ಲಾ ಚುನಾವಣಾಧಿಕಾರಿ ಮತಪೆಟ್ಟಿಗೆಗಳನ್ನು ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿರಿಸಿದರು. ಮತ ಎಣಿಕೆ ನಡೆಯುವ ಡಿ.14 ರವರೆಗೂ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.