Advertisement

ಮತವ ಹಾಕು ಮನುಸ ನೀ ಚುನಾವಣೆಯ ದಿವಸ

11:57 PM Apr 14, 2019 | Sriram |

ಸುಳ್ಯ: ನಗರದ ಮನೆ-ಮನೆ, ಅಂಗಡಿ, ಮಾರುಕಟ್ಟೆಯಿಂದ ದಿನವಿಡಿ ಕಸ ಒಯ್ಯುವ ವಾಹನವೀಗ ಮತದಾನದ ಜಾಗೃತಿ ಸಂದೇಶ ಸಾರುತ್ತಿದೆ. ಮತವ ಹಾಕು ಮನುಸ ಚುನಾವಣೆಯ ದಿವಸ… ಎನ್ನುವ ಹಾಡು ಕೇಳಿಸಿ ಗಮನ ಸೆಳೆಯುತ್ತಿದೆ.

Advertisement

ನಗರದ ವಾರ್ಡ್‌ಗಳಲ್ಲಿ ಸಂಚರಿಸುವ ಕಸ ಸಂಗ್ರಹ ವಾಹನಗಳಲ್ಲಿ ಈ ಹಾಡು ಜನರಿಗೆ ಮತದಾನದ ಮಹತ್ವ ಸಾರುತ್ತಿದೆ. ಸ್ವೀಪ್‌ ಸಮಿತಿ ಜಾಗೃತಿ ಹಾಡನ್ನು ಪ್ರಾಯೋಜಿಸಿದೆ.

ಮತದಾನದ ಮಹತ್ವ
“ಒಳಿತು ಮಾಡು ಮನುಸ ನೀ ಇರೋದೆ ಮೂರು ದಿವಸ’ ಎನ್ನುವ ಕನ್ನಡ ಹಾಡಿನ ಟ್ಯೂನ್‌ಗೆ ಚುನಾವಣೆ ಜಾಗೃತಿ ಗೀತೆ ರೂಪದಲ್ಲಿ ಪದ್ಯ ಬರೆದು ಹಾಡಲಾಗಿದೆ. ಐದು ನಿಮಿಷದ ಈ ಹಾಡಿನಲ್ಲಿ ಮತದಾನದ ಮಹತ್ವ ಸಾರಲಾಗಿದೆ. ಮತದಾನ ಮಾಡಿದ ಮೇಲೆ ನಿಮ್ಮನ್ನ ಜಾಣ ಅನ್ನುತ್ತಾರೆ ಎನ್ನುವ ಸಾಲು ಇದರಲ್ಲಿದೆ. ನೀವು ಒಂದು ಮತ ಹಾಕಬೇಕು, ಮತವೇ ನಿಮ್ಮ ಹಕ್ಕು, ಮತದಾನ ಕಡ್ಡಾಯ ಎನ್ನುತ್ತಲೇ ಮತ ಚಲಾಯಿಸಲು ಮರೆಯಬೇಡಿ ಎಂದು ಹಾಡಿನ ಮೂಲಕ ಎಚ್ಚರಿಸಲಾಗುತ್ತಿದೆ.

ಓಟು ಮಾರಿಕೊಳ್ಳಬೇಡಿ, ನಾಡಿಗಾಗಿ ಜಾಗೃತಿ ಇರಲಿ ಅಣ್ಣಾ ಎಂದು ವಿನಂತಿಸುತ್ತಾ, ನೀನು ಚಲಾಯಿಸುವುದು ಒಂದು ಮತ ಮಾತ್ರ ಎಂದು ತಿಳಿಯಬೇಡಿ. ಅದು ದೇಶಕ್ಕಾಗಿ ಬಹಳ ಮುಖ್ಯ ಎನ್ನುವ ಸಂದೇಶ ಸಾರುತ್ತಾ ಸಾಗುವುದು ವಿಶೇಷ.

ಸೈರನ್‌ ಜಾಗದಲ್ಲಿ ಹಾಡು
ನ.ಪಂ.ನಲ್ಲಿ ಕಸ ಸಂಗ್ರಹಕ್ಕೆ ಮೂರು ವಾಹನಗಳು ಇವೆ. ಇದರಲ್ಲಿ ಎರಡು ವಾಹನ ಮನೆ-ಮನೆ ಸಂಚರಿಸಿದರೆ, ಇನ್ನೊಂದು ವಾಹನ ಮುಖ್ಯ ರಸ್ತೆಯ ಅಂಗಡಿ, ಮಾರುಕಟ್ಟೆಗಳಲ್ಲಿ ಕಸ ಸಂಗ್ರಹಿಸುತ್ತದೆ. ಈ ಮೂರು ವಾಹನಗಳಲ್ಲಿ ಈ ಜಾಗೃತಿ ಹಾಡು ಬಳಸಲಾಗಿದೆ. ನ.ಪಂ. ವತಿಯಿಂದ ಹಾಡು ಡೌನ್‌ಲೋಡ್‌ ಮಾಡಿ, ಪೆನ್‌ಡ್ರೈವ್‌ ಬಳಸಿ ಲಘು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಗುತ್ತಿದೆೆ. ಕಸ ಲೋಡ್‌, ಅನ್‌ಲೋಡ್‌, ಸಂಚಾರದ ವೇಳೆಯಲ್ಲಿ ಹಾಡು ಮತ್ತೆ -ಮತ್ತೆ ಪುನರಾವರ್ತನೆ ಆಗುತ್ತದೆ. ಹಾಗಾಗಿ ಪೇಟೆಯಲ್ಲಿ “ಮತವ ಹಾಕು ಮನುಷ್ಯ ನೀ ಚುನಾವಣೆ ದಿವಸ…’ ಎನ್ನುವ ಹಾಡು ಕೇಳುತ್ತಲಿದೆ.

Advertisement

ಜಾಗೃತಿ ಹಾಡು
ಕಳೆದ ಶುಕ್ರವಾರದಿಂದ ಈ ಹಾಡನ್ನು ಹಾಕುತ್ತಿದ್ದೇವೆ. ಕಸ ವಾಹನಕ್ಕೆ ತನ್ನಿ ಎನ್ನುವ ಸೈರನ್‌ ಜತೆಗೆ ಮತದಾನ ಜಾಗೃತಿ ಹಾಡಿನ ಮೂಲಕ ಸಂಚಾರ ಆರಂಭಿಸಿದ್ದೇವೆ. ಕಸ ಹಾಕುವ ವೇಳೆ ಈ ಹಾಡು ನಾಗರಿಕರ ಗಮನ ಸೆಳೆಯುತ್ತಿದೆ.
ರಮೇಶ್‌
ವಾಹನ ಚಾಲಕ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next