ಬೆಂಗಳೂರು/ಕೆಂಗೇರಿ: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಕೋವಿಡ್ ದೃಢಪಟ್ಟವರಿಗೂ ನ.3ರ ಚುನಾವಣೆ ದಿನದ ಸಂಜೆ 5 ರಿಂದ 6 ಗಂಟೆಯ ವರೆಗಿನ ಕೊನೆಯ ಒಂದು ಗಂಟೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.
ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.3ಕ್ಕೆ ಆರ್.ಆರ್.ನಗರ ಉಪಚುನಾವಣೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ 17 ದಿನದಲ್ಲಿ 1177 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಎಲ್ಲರಿಗೂ
ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್, ಪಿಪಿಇ ಕಿಟ್ ನೀಡುತ್ತೇವೆ. ಸೋಂಕು ದೃಢಪಟ್ಟು ಮತದಾನ ಮಾಡಲುಇಚ್ಚಿಸು ವವರಿಗೆ ಕಂಟ್ರೋಲ್ ರೂಂ ಸಿಬ್ಬಂದಿ ಕರೆ ಮಾಡಲಿದ್ದಾರೆ. ಸೋಂಕಿತರಿಗೆ ಮತದಾನದ ವ್ಯವಸ್ಥೆಗಾಗಿ ಆರ್.ಆರ್.ನಗರ 9 ವಾರ್ಡ್‌ಗೂ ತಲಾ ಹತ್ತು ಆ್ಯಂಬುಲೆನ್ಸ್‌ನಂತೆ ಒಟ್ಟು 90 ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 4.30ಕ್ಕೆ ಕೋವಿಡ್ ಸೋಂಕು ದೃಢಪಟ್ಟವರ ಮನೆಯ ಮುಂದೆ ಆ್ಯಂಬುಲೆನ್ಸ್ ಹೋಗಲಿದೆ. ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ಮತದಾನದ ಕಡೇ ಒಂದು ಗಂಟೆ 5 ರಿಂದ 6 ಗಂಟೆಯವರೆಗೆ ಮತದಾನ ಮಾಡಿಸಿ, ವಾಪಸ್ ಮನೆಗೆ ಬಿಡಲಾಗುತ್ತದೆ ಎಂದರು.
ಅ.28ರ ವರೆಗೆ ಆರ್.ಆರ್. ನಗರದಲ್ಲಿ ಕೋವಿಡ್ ದೃಢಪಟ್ಟವರಲ್ಲಿ ಆಸ್ಪತ್ರೆಯಲ್ಲಿ 317 ಜನ, ಮನೆಯಲ್ಲಿ 842 ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿ 17ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ದೃಢಪಟ್ಟವರು ಮತದಾನ ಮಾಡಲು ಬರುವ ಸಂದರ್ಭದಲ್ಲಿ ಕೊರೊನೇತರರು ಮತದಾನಕ್ಕೆ ಬಂದರೂ, ಮತಗಟ್ಟೆ ಪೂರ್ಣ ಸ್ಯಾನಿಟೈಸ್ ಮಾಡಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ವೃದ್ಧರಿಗೆ, ದಿವ್ಯಾಂಗರಿಗೆ ಪೋಸ್ಟಲ್ ಬ್ಯಾಲೆಟ್: ಆರ್.ಆರ್. ನಗರಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 5,560 ಹಿರಿಯ ನಾಗರಿಕರು ಹಾಗೂ 695 ಜನ ವಿಕಲಚೇತರು ಇದ್ದಾರೆ. ಇವರಲ್ಲಿ 489 ಹಿರಿಯ ಮತದಾರರು ಹಾಗೂ 23 ವಿಕಲಚೇತನರು ಪೋಸ್ಟಲ್ ಬ್ಯಾಲೆಟ್‌ನ ಮೂಲಕ ಮತದಾನ ಮಾಡಲು ಇಚ್ಛಿಸಿದ್ದಾರೆ. ಪಾಲಿಕೆ ಸಿಬ್ಬಂದಿ ಇವರ ಮನೆಗೇ ಭೇಟಿ ನೀಡಿ, ಮತದಾನ ಮಾಡಲು ಅವಕಾಶ ಕಲ್ಪಿಸಲಿದ್ದಾರೆ. ಈ ಪ್ರಕ್ರಿಯೆ ಸಂಪೂರ್ಣ ವಿಡಿಯೋ ಚಿತ್ರಣ ನಡೆಯಲಿದೆ ಎಂದರು.
ನೋಟಾಗಾಗಿ ಪ್ರತ್ಯೇಕ ಬ್ಯಾಲೆಟ್ ಯೂನಿಟ್: ಸಾಮಾನ್ಯವಾಗಿ ಬ್ಯಾಲೆಟ್ ಯೂನಿಟ್‌ನಲ್ಲಿ ಕೊನೆಯ ಆಯ್ಕೆಯಲ್ಲಿ ನೋಟಾ ಚಲಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಆರ್.ಆರ್ ನಗರದಲ್ಲಿ 16 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ, ನೋಟಾ ಚಲಾವಣೆಗೆ ಪ್ರತ್ಯೇಕ ಬ್ಯಾಲೆಟ್ ಯೂನಿಟ್ ವ್ಯವಸ್ಥೆ ಮಾಡಲಾಗಿದೆ ಎಂದರು.