ಬೆಂಗಳೂರು: ಮಲ್ಲೇಶ್ವರ ಬಿಜೆಪಿ ಅಭ್ಯರ್ಥಿ ಡಾ.ಅಶ್ವಥ್‌ನಾರಾಯಣ ಅವರು ಮಂಗಳವಾರ ಸೈಕಲ್ ಜಾಥಾ ಮೂಲಕ ಮತಯಾಚನೆ ಮಾಡಿದರು. ನಟಿ ತಾರಾ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾಥ್ ನೀಡಿದರು.
ಗಾಯತ್ರಿನಗರದ ಅಂಬಾಭವಾನಿ ದೇವಸ್ಥಾನ ಬಳಿಯಿಂದ ಬೆಳಗ್ಗೆ ಪ್ರಚಾರ ಕಾರ್ಯ ಆರಂಭಿಸಿದ ಅವರು ಕಾರ್ಯಕರ್ತರ ಜತೆ ಸೈಕಲ್ ಜಾಥದ ಮೂಲಕ ಮತ ಯಾಚಿಸಿದ ಅಶ್ವಥ್‌ನಾರಾಯಣ, ಪ್ರಸಕ್ತ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ದೇಶ ಕಂಡ ಶೇಷ್ಠ ನಾಯಕ ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಯಡಿಯೂರಪ್ಪನವರ ಸರ್ಕಾರ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲಿದೆ. ಇದನ್ನು ತಡೆಯುವುದು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಭ್ರಷ್ಟಾಚಾರ ತಡೆಗಾಗಿ ಇದ್ದ ಲೋಕಾಯುಕ್ತ ಸಂಸ್ಥೆಯ ಪರಮಾಧಿಕಾರವನ್ನು ಕಿತ್ತುಕೊಂಡ ಸರ್ಕಾರ. ಭ್ರಷ್ಟಾಚಾರಕ್ಕಾಗಿ ಸರ್ಕಾರಿ ನೀತಿಗಳನ್ನೇ ಬದಲಿಸಿದ್ದಾರೆ. ಇದು ಟೆನ್ ಪರ್ಸೆಂಟ್ ಅಲ್ಲ ತರ್ಟಿ ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದರು.
ಕಾಂಗ್ರೆಸ್ ದೇಶದಲ್ಲಿ ಅಸ್ಥಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಕರ್ನಾಟಕವನ್ನು ತನ್ನ ಪಾಲಿನ ಎಟಿಎಂ ಮಾಡಿಕೊಂಡಿದೆ. ಇಲ್ಲಿನ ಭ್ರಷ್ಟಾಚಾರದ ಹಣದಿಂದಲೇ ಪಕ್ಷ ಮುನ್ನಡೆಯುತ್ತಿದೆ ಎಂದು ದೂರಿದರು. ಈ ಸಂದರ್ಭ ನಟಿ, ಕನ್ನಡ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷೆ ತಾರಾ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಚಾರಕ್ಕೆ ಮೆರುಗು ನೀಡಿದರು.
ಮಲ್ಲೇಶ್ವರ ಮಹಿಳೆಯರಿಗೆ ಅತಿ ಸುರಕ್ಷಿತ ಪ್ರದೇಶವಾಗಿದೆ. ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ನಟಿ ತಾರಾ ಮತ ಯಾಚಿಸಿದರು. ತಾರಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.