Advertisement

ಗ್ರಾಮಸ್ಥರಿಂದ ಬೆಳಗಾವಿ ಲೋಕಸಭೆ ಉಪಚುನಾವಣೆಯ ಮತದಾನ ಬಹಿಷ್ಕಾರ

05:59 PM Apr 18, 2021 | Team Udayavani |

ರಾಮದುರ್ಗ: ಗ್ರಾಮಗಳ ಸ್ಥಳಾಂತರಕ್ಕೆ ಸ್ಪಂದಿಸದ ಸರಕಾರದ ಕ್ರಮವನ್ನು ಖಂಡಿಸಿ ತಾಲೂಕಿನ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಸ್ಥರು ಶನಿವಾರ ನಡೆದ ಬೆಳಗಾವಿ ಲೋಕಸಭೆ ಉಪಚುನಾವಣೆಯ ಮತದಾನವನ್ನು ಬಹಿಷ್ಕರಿಸಿದರು.

Advertisement

ಮಲಪ್ರಭಾ ನದಿ ದಂಡೆಯಲ್ಲಿರುವ ಈ ಗ್ರಾಮಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ಜನತೆ ತೀವ್ರ ಸಂಕಷ್ಠ ಎದುರಿಸುವಂತಾಗಿದ್ದು, ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಸರಕಾರ ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು. 2006ರಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿಯೇ ಗ್ರಾಮಗಳನ್ನು ಸ್ಥಳಾಂತರ ಮಾಡಲು ಆಗ್ರಹಿಸಲಾಗಿದೆ.

2019, 2020ರಲ್ಲಿ ಮತ್ತೆ ಎರಡು ಬಾರಿ ಪ್ರವಾಹ ಉಂಟಾದ ಪರಿಣಾಮ ತಿಂಗಳಾನುಗಟ್ಟಲೇ ಅಲೆದಾಡುವ ದುಸ್ಥಿತಿ ಗ್ರಾಮಸ್ಥರಿಗೆ ಎದುರಾಗಿತ್ತು. ಪ್ರವಾಹದಲ್ಲಿ ಮನೆಗಳು ಬಿದ್ದು, ವಾಸಿಸಲು ಸೂರು ಇಲ್ಲದ ವಾತಾವರಣ ನಿರ್ಮಾಣವಾಗಿದ್ದು, ಸರಕಾರ ಮಾತ್ರ ಇಲ್ಲಿಯವರೆಗೂ ಸಂತ್ರಸ್ತರ ಗೋಳು ಆಲಿಸುತ್ತಿಲ್ಲ. ಗ್ರಾಮಗಳ ಸ್ಥಳಾಂತರಕ್ಕೆ ಗ್ರಾಮಸ್ಥರು ತಮ್ಮ ಜಮೀನುಗಳನ್ನು ನೀಡಲು ಒಪ್ಪಿಕೊಂಡು ಸ್ಥಳಾಂತರಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ತಾಲೂಕಾಡಳಿತ, ಜಿಲ್ಲಾಡಳಿತದ ಮೂಲಕ ಸರಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿಗಳ ವರೆಗೆ ತಲುಪಿಸಿ ವರ್ಷಗಳು ಕಳೆಯುತ್ತಿದ್ದರೂ ಸರಕಾರದಿಂದ ಯಾವುದೇ ಉತ್ತರ ದೊರೆತಿಲ್ಲ. ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಫಲ ಕೊಡದ ಮನವೊಲಿಕೆ ಯತ್ನ: ಬಹಿಷ್ಕಾರದ ಸುದ್ಧಿ ತಿಳಿಯುತ್ತಿದ್ದಂತೆ ಸಹಾಯಕ ಚುನಾವಣಾಧಿ ಕಾರಿ ಅಶೋಕ ಗುರಾಣಿ, ತಹಶೀಲ್ದಾರ್‌ ಎ.ಡಿ. ಅಮರವಾದಗಿ, ಪ್ರೊಬೆಷನರಿ ಎಸಿ ಅಭಿಷೇಕ ವಿ., ಡಿವೈಎಸ್‌ಪಿ ರಾಮನಗೌಡ ಹಟ್ಟಿ ಸೇರಿದಂತೆ ಹಲವರು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಗ್ರಾಮಸ್ಥರು ತಮ್ಮ ಪಟ್ಟು ಸಡಿಲಿಸದೇ ಮತದಾನ ಕೇಂದ್ರ 229 ಮತ್ತು 229-ಎ ಎರಡು ಮತಗಟ್ಟೆಗಳಲ್ಲಿ ಯಾರೊಬ್ಬರೂ ಮುಂಜಾನೆಯಿಂದ ಸಂಜೆವರೆಗೂ ಮತದಾನ ಮಾಡದೇ ಇರುವುದು ಕಂಡು ಬಂತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸೋಮರಡ್ಡಿ ಗೊಂದಿ, ಈರಪ್ಪ ಹರನಟ್ಟಿ, ಭೀಮಪ್ಪ ಹರನಟ್ಟಿ, ವಿರೂಪಾಕ್ಷಗೌಡ ಕುಲಕರ್ಣಿ, ಶಿವಪ್ಪ ಹರನಟ್ಟಿ, ಹಣಮಂತ ಹಳ್ಳಿ, ಬಸವರಾಜ ಖಾನಾಪುರ, ಪುಂಡಲೀಕ ಹಳ್ಳಿ, ಶೇಖರಗೌಡ ಪಾಟೀಲ, ಬಸನಗೌಡ ಪಾಟೀಲ, ರಾಮಣ್ಣ ಜಾಧವ, ರಮೇಶ ಜಾಧವ, ಕಲ್ಲನಗೌಡ ಪಾಟೀಲ, ನಾಗನಗೌಡ ಕುಲಕರ್ಣಿ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next