Advertisement

ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

05:40 PM Mar 13, 2020 | Suhan S |

ಜೋಯಿಡಾ: ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ಹೆಬ್ಟಾಳ ಮತು ನೇತುರ್ಗಾ ಗ್ರಾಮಗಳಿಗೆ ಹೆಬ್ಟಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ, ಕಾಯಂ ಶಿಕ್ಷಕರ ನೇಮಕ, ರಸ್ತೆ, ವಿದ್ಯುತ್‌ ಸಂಪರ್ಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಕಾರಿಗಳಿಗೆ ಮನವಿ ಮಾಡಿದ್ದು, ಸ್ಪಂದಿಸದಿದ್ದರೆ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿರುತ್ತಾರೆ.

Advertisement

ಉಳವಿ ಗ್ರಾಪಂ ವ್ಯಾಪ್ತಿಯ ಹೆಬ್ಟಾಳ ಹಾಗೂ ನೆತುರ್ಗಾ ಗ್ರಾಮ ಉಳವಿಯಿಂದ 5 ರಿಂದ 8ಕಿಮೀ ದೂರವಿದೆ. ಈ ಎರಡೂ ಗ್ರಾಮದಲ್ಲಿ ಒಟ್ಟು 180 ಕ್ಕೂ ಹೆಚ್ಚು ಮತದಾರರಿದ್ದು, ಈ ಗ್ರಾಮದ ಮತದಾರರು ಚುನಾವಣೆಯಂದು ದೂರದ ಉಳವಿ ಮತಗಟ್ಟೆಗೆ ಗುಡ್ಡವನ್ನು ಏರಿ ಹೋಗಲು ಸಾಧ್ಯವಾಗದೆ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ 2014 ರಲ್ಲಿ ಜಿಲ್ಲಾಡಳಿತಕ್ಕೆ ಹೆಬ್ಟಾಳ ಶಾಲೆಯಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದ್ದು, ಚುನಾವಣಾ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಾಗ ಅಂದಿನ ತಾಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮುಂದಿನ ಚುನಾವಣೆ ಪೂರ್ವದಲ್ಲಿ ಹೆಬ್ಟಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಈ ಭರವಸೆ ಇಂದಿಗೂ ಈಡೇರಿಲ್ಲ. ಕೂಡಲೆ ಮತಗಟ್ಟೆ ಸ್ಥಾಪಿಸಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಉಳವಿಯಿಂದ ಗದ್ದೆಮನೆ ಗ್ರಾಮದವರೆಗೆ ಮಂಜೂರಾದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಹಾಳಾದ ಧೂಳು ತುಂಬಿದ ರಸ್ತೆಯಲ್ಲಿ ಹಾಗೂ ಅರ್ಧಮರ್ಧಗೊಂಡ ರಸ್ತೆಗಳ ಜೆಲ್ಲಿಕಲ್ಲುಗಳ ನಡುವೆ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆ ದುರಸ್ತಿ ಕಾರ್ಯ ಕೂಡಲೆ ಆರಂಭಿಸಬೇಕು.

ಹೆಬ್ಟಾಳ ಶಾಲೆಗೆ ಕಾಯಂ ಶಿಕ್ಷಕರಿಲ್ಲದೆ ಮಕ್ಕಳು ತೊಂದರೆ ಪಡುವಂತಾಗಿದೆ. ನಮ್ಮ ಮಕ್ಕಳ ಹಿತದೃಷ್ಟಿಯಿಂದ ತ್ವರಿತವಾಗಿ ಒಂದು ಕಾಯಂ ಶಿಕ್ಷರನ್ನು ನೇಮಿಸಬೇಕು ಹಾಗೂ ವಿದ್ಯುತ್‌ ಸಂಪರ್ಕವಿಲ್ಲದ ಗದ್ದೆಮನೆ ಗ್ರಾಮದ ಎರಡು ಮನೆಗಳಿಗೆ ಕೂಡಲೆ ವಿದ್ಯುತ್‌ ಸಂಪರ್ಕ ನೀಡುವ ಮೂಲಕ ನಮ್ಮ ಬೇಡಿಕೆ ಈಡೇರಿಸಬೇಕೆಂದು ಸಹಾಯಕ ಆಯುಕ್ತೆ ಪ್ರಿಯಾಂಕ ಅವರಿಗೆ ಜೋಯಿಡಾ ತಹಶೀಲ್ದಾರ್‌ ಕಚೇರಿಯಲ್ಲಿ ಮನವಿ ನೀಡಿದ್ದು, ಕೂಡಲೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.

ಹೆಬ್ಟಾಳ ಹಾಗೂ ನೆತುರ್ಗಾ ಗ್ರಾಮದ ಪ್ರಮುಖರಾದ ಗ್ರಾ.ಪ ಅಧ್ಯಕ್ಷ ಮಂಜುನಾಥ ಮೋಕಾಶಿ, ನರಸಿಂಹ ತಮ್ಮು ಗೌಡಾ, ಗಣೆಶ ಗೌಡಾ, ಗೋಪಳ ಭಟ್ಟ ಶಿವಪುರ, ಡಿ.ಆರ್‌. ಗೌಡಾ, ಶಂಕರ ಗೌಡಾ, ವಿ.ಜಿ. ಮಿರಾಶಿ, ಕಾವೇರಿ ಗೌಡ, ಲಕ್ಷ್ಮಣ ಗೌಡಾ, ವೆಂಕಣ್ಣ ಗೌಡಾ, ವಾಸುದೇವ ಗೌಡಾ ಮುಂತಾದವರು ಬರುವ 26 ರೊಳಗಾಗಿ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾ.27 ರಿಂದಲ್ಲೇ ಅನಿರ್ದಿಷ್ಟಾವಧಿ ಹೋರಾಟ ಹಾಗೂ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಜಿಲಾಡಳಿತಕ್ಕೆ ಎಚ್ಚರಿಕೆ ನೀಡಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next