Advertisement

ಲೋಕ ಸಮರಕ್ಕೆ  ಮತದಾನ ಜಾಗೃತಿ ವಾಹನ 

03:41 PM Mar 25, 2019 | Naveen |
ಜಮಖಂಡಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಾಡಳಿತ ಹೊಸದೊಂದು ವಿಶೇಷ ಮತದಾನ ಜಾಗೃತಿಗಾಗಿ ಮತದಾನ ಪ್ರದರ್ಶನ ವಾಹನ ಸಿದ್ಧಪಡಿಸಿದ್ದು, ಕ್ಷೇತ್ರದ ನಗರ ಪ್ರದೇಶ ಸೇರಿದಂತೆ ತಾಲೂಕಿನ 42 ಗ್ರಾಮದಲ್ಲಿ ಸಂಚರಿಸುತ್ತಿದೆ.
ತಾಲೂಕಾಡಳಿತ ಟಾಟಾ ವಾಹನದಲ್ಲಿ ಮತದಾನ ಯಂತ್ರ, ಮತದಾರರ ಬ್ಯಾಲೆಟ್‌ ಮಷೀನ್‌ ಹಾಗೂ ಮತದಾನ ಖಾತ್ರಿ ಮಾಡುವ ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ಪ್ರದರ್ಶನ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದೆ. ಮನೆಬಾಗಿಲಿಗೆ ಮತದಾನ ಮಾಹಿತಿ ಲಭ್ಯವಾಗುತ್ತಿರುವುದಕ್ಕೆ ಮತದಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಚೆಕ್‌ಪೋಸ್ಟ್‌ ಸ್ಥಾಪನೆ: ಲೋಕಸಭಾ ಚುನಾವಣೆಗೆ ತಾಲೂಕಾಡಳಿ ಸಕಲ ಸಿದ್ದತೆ ನಡೆದಿದ್ದು, ಈಗಾಗಲೇ ಜಮಖಂಡಿ, ತೇರದಾಳ ಎರಡು ವಿಧಾನಸಭೆ ಕ್ಷೇತ್ರದಲ್ಲಿ ತೇರದಾಳ, ಬುದ್ನಿ, ಚಿಕ್ಕಲಕಿ, ಚಿನಗುಂಡಿ ಕ್ರಾಸ್‌, ಢವಳೇಶ್ವರ, ಹುಲ್ಯಾಳ ಕ್ರಾಸ್‌, ಹುನ್ನೂರು ಕ್ರಾಸ್‌ ಸೇರಿ 7 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ಚೆಕ್‌ಪೋಸ್ಟ್‌ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ.
ಸಿ-ವಿಜಿಲ್‌ ಮೊಬೈಲ್‌ ಆ್ಯಪ್‌: ತೇರದಾಳ, ಜಮಖಂಡಿ ಕ್ಷೇತ್ರದಲ್ಲಿ 43 ಸೆಕ್ಟರ್‌ ಅಧಿಕಾರಿಗಳು, ವಿಡಿಯೋ ತಂಡ, 12 ಫ್ಲೈಯಿಂಗ್‌ ತಂಡ ಕರ್ತವ್ಯದಲ್ಲಿದೆ. ಸಾರ್ವಜನಿಕರು ಮುಕ್ತವಾಗಿ ಸಿ-ವಿಜಿಲ್‌ ಮೊಬೈಲ್‌ ಆ್ಯಪ್‌ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರು ಎಷ್ಟು?: ತೇರದಾಳ ಕ್ಷೇತ್ರದಲ್ಲಿ 1,10,171 ಪುರುಷರು, 1,09,790 ಮಹಿಳೆಯರು, 10 ಇತರೆ ಸೇರಿ 2,19,971 ಮತದಾರರಿದ್ದರೆ ಜಮಖಂಡಿ ಕ್ಷೇತ್ರದಲ್ಲಿ 1,02,656 ಪುರುಷರು, 1,02,116 ಮಹಿಳೆಯರು, 6 ಇತರೆ ಸೇರಿ 2,04,778 ಮತದಾರರಿದ್ದಾರೆ. ಜಮಖಂಡಿ-ತೇರದಾಳದಲ್ಲಿ 191 ನಗರಪ್ರದೇಶ ಮತಗಟ್ಟೆ, 276 ಗ್ರಾಮೀಣ ಮತಗಟ್ಟೆ ಸೇರಿ ಒಟ್ಟು 467 ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಜೋಡಣೆ ಕೆಲಸ ನಡೆದಿದೆ. ಪ್ರಸಕ್ತ ಚುನಾವಣೆಯಲ್ಲಿ ಹೊಸ ಮತದಾರರ ಸೇರ್ಪಡೆಯಿಂದ ತೇರದಾಳ-ಜಮಖಂಡಿ ಕ್ಷೇತ್ರದಲ್ಲಿ 22 ಹೊಸ ಮತಗಟ್ಟೆ ಸ್ಥಾಪನೆಯಾಗಿವೆ.
ಚುನಾವಣೆ ಹಿನ್ನೆಲೆಯಲ್ಲಿ ಮುಧೋಳ, ಬೀಳಗಿ, ಹುನಗುಂದ, ಬಾಗಲಕೋಟೆ ಮತ್ತು ಜಮಖಂಡಿ ತಾಲೂಕಿನಿಂದ ಅಂದಾಜು 2,055 ಚುನಾವಣಾ ಸಿಬ್ಬಂದಿ ನೇಮಿಸಲಾಗಿದೆ. ಸುವಿಧಾ ಸಿಂಗಲ್‌ ವಿಂಡೋ ಆನ್‌ಲೈನ್‌ ಮೂಲಕ ಅಭ್ಯರ್ಥಿ, ರಾಜಕೀಯ ಪಕ್ಷದವರು ಅರ್ಜಿ ಸಲ್ಲಿಸಬಹುದಾಗಿದ್ದು, ನಿರಂತರ ಸೇವೆಗೆ, ಸಮಸ್ಯೆಗಳಿಗೆ 1950 ಕಾಲ್‌ ಸೆಂಟರ್‌ ತೆರೆಯಲಾಗಿದ್ದು ದೂರು ಸಲ್ಲಿಸಲು ದಿನದ 24 ಗಂಟೆ ಸೇವೆಯಲ್ಲಿದೆ.
ತೇರದಾಳ, ಜಮಖಂಡಿ ಕ್ಷೇತ್ರದಲ್ಲಿ ಮುಕ್ತ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, ಎಲ್ಲ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ನಡೆದಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪಾರದರ್ಶಕ ಮತದಾನಕ್ಕಾಗಿ ಪೊಲೀಸ್‌ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
. ಇಕ್ರಮ ಶರೀಫ್‌,
ಸಹಾಯಕ ಚುನಾವಣಾಧಿಕಾರಿ ಮತ್ತು
ಉಪ ವಿಭಾಗಾಧಿಕಾರಿ, ಜಮಖಂಡಿ
Advertisement

Udayavani is now on Telegram. Click here to join our channel and stay updated with the latest news.

Next