ಕಲಬುರಗಿ: ಜಿಲ್ಲೆಯ ಎಲ್ಲ ಮತದಾರರಿಗೆ ತಲುಪುವ ಮೂಲಕ ಅವರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಅಮ್ಮಾ ಸಮಾಜ ಅಭಿವೃದ್ಧಿ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಾತ್ರ ರಾಜ್ಯಕ್ಕೆ ಮಾದರಿಯಾದ ಕೌಂಟ್ ಡೌನ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡು ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ರತಿ ದಿನ ವಿನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.64 ಮತದಾನವಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ. 15 ರಿಂದ 20 ರಷ್ಟು ಮತದಾನ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮತದಾರರಿಗೆ ಕಡ್ಡಾಯ ಮತ್ತು ನೈತಿಕ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನಕ್ಕೆ ಕೇವಲ 10 ದಿನಗಳು ಉಳಿದಿದ್ದು, ಕಡ್ಡಾಯ ಮತದಾನದ ಕುರಿತು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್ ಮಾತನಾಡಿ, ನಗರದಲ್ಲಿ ಸ್ವೀಪ್ ಸಮಿತಿಯಿಂದ 6 ತಂಡಗಳನ್ನು ರೂಪಿಸಿ ಪ್ರತಿ ಮನೆ ಮನೆಗೆ ಭೇಟಿ ನೀಡಲಾಗುತ್ತಿದೆ. ಎಲ್ಲ ಮನೆಗಳಿಗೆ ಕರ ಪತ್ರ ಹಂಚುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಚುನಾವಣೆ ಕರ್ತವ್ಯವು ಒಂದು ವಿಶೇಷವಾದ ಹಾಗೂ ಪವಿತ್ರವಾದ ಕೆಲಸವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಚುನಾವಣಾ ಕರ್ತವ್ಯವನ್ನು ಭಾರ ಎಂದು ಭಾವಿಸಬಾರದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಆರ್. ರೆಡ್ಡಿ ಮಾತನಾಡಿ, ಕಡ್ಡಾಯ ಮತದಾನದ ಕುರಿತು ಸಾರ್ವತ್ರಿಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೊಡ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ, ಪರಮೇಶ್ವರ ಶೆಟಗಾರ, ಸುಭಾಷ ಚಕ್ರವರ್ತಿ, ನಾಗರತ್ನಾ ದೇಶಮಾನೆ, ಸಂದೀಪ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.