ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಎಲ್ಲ ಇಲಾಖೆಯವರು ತಾವು ಮುಂದಿನ ದಿನಗಳಲ್ಲಿ ನಡೆಸುವ ಕಾರ್ಯಕ್ರಮದ ವೇಳಾಪಟ್ಟಿ ತಯಾರಿಸಿ ಗುರುವಾರ ಸ್ವೀಪ್ ಸಮಿತಿಗೆ ನೀಡುವಂತೆ ಜಿ.ಪಂ. ಸಿಇಒ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್ ಹೇಳಿದರು.
ಅವರು ಬುಧವಾರ ಜಿ.ಪಂ.ನಲ್ಲಿ ಸ್ವೀಪ್ ಸಮಿತಿಯ ವತಿಯಿಂದ ಕೈಗೊಳ್ಳಬೇಕಾದ ಮತದಾನ ಜಾಗೃತಿ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿದರು.
ಮತದಾನದ ಜಾಗೃತಿ ನೀಡುವ ಸಲುವಾಗಿ ಎಲ್ಲ ಇಲಾಖೆಗಳು ಕಾರ್ಯಪ್ರವೃತ್ತರಾಗಬೇಕಿದ್ದು, ಇಲಾಖೆಯ ಅಧಿಕಾರಿಗಳು ನಡೆಸಬೇಕೆಂದಿರುವ ಕಾರ್ಯಕ್ರಮಗಳ ಯೋಜನೆಯನ್ನು ಹಾಕಿಕೊಳ್ಳುವಂತೆ ಸೂಚನೆ ನೀಡಿದರು.
ಯಾವುದೇ ಕಾರ್ಯಕ್ರಮ ನಡೆಸುವಾಗ ನೀತಿ ಸಂಹಿತೆಯ ಚೌಕಟ್ಟಿನಲ್ಲೇ ನಡೆಸಬೇಕು ಹಾಗೂ ರ್ಯಾಲಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುವಾಗ ಪಕ್ಷವನ್ನು ಸೂಚಿಸುವ ಚಿಹ್ನೆ ಅಥವಾ ಸ್ಟಿಕ್ಕರ್ ಮುಚ್ಚುವಂತೆ ನೆಹರೂ ಯುವ ಕೇಂದ್ರದ ಜಿಲ್ಲಾ ಕೋ-ಆರ್ಡಿನೇಟರ್‌ಗೆ ಸೂಚಿಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಮತದಾನದ ಕುರಿತು ಜಾಗೃತಿ ಅಗತ್ಯವಾಗಿದೆ. ಆದರೆ ಪ್ರಸ್ತುತ ಪರೀಕ್ಷೆ ನಡೆಯುತ್ತಿರುವ ಕಾರಣ ಅಸಾಧ್ಯ. ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ನೀಡುವುದು, ವಿದ್ಯಾರ್ಥಿಗಳ ಪೋಷಕರಿಗೆ ಅರಿವು ಕಾರ್ಯಕ್ರಮ, ಇವಿಎಂ ಮತ ಯಂತ್ರದ ಕುರಿತು ಮಾಹಿತಿ ಪ್ರಾತ್ಯಕ್ಷಿಕೆ ನಡೆಸಬಹುದು ಎಂದು ಪದವಿಪೂರ್ವ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಮೀನುಗಾರ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಇವಿಎಂ ಪ್ರಾತ್ಯಕ್ಷಿಕೆ ನಡೆಸಬೇಕು ಹಾಗೂ ಮತದಾನದ ದಿನವನ್ನು ತಿಳಿಸಬೇಕು. ಮೀನುಗಾರಿಕೆಗೆ ತೆರಳುವವರು ಹಿಂದಿರುಗಲು 10ರಿಂದ 15 ದಿನಗಳಾಗುತ್ತವೆ. ಆದ ಕಾರಣ ಮತದಾನದ ದಿನಾಂಕವನ್ನು ತಿಳಿಸಿ ಆ ದಿನದಂದು ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾಕರಿಗೆ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಿ, ಮತದಾನದ ಪ್ರತಿಜ್ಞಾ ವಿಧಿ ಬೋಧಿಸಬೇಕು ಹಾಗೂ ಸಖೀ ಬೂತ್‌ಗಳ ಪರಿಶೀಲನೆ ನಡೆಸಿ ಸಜ್ಜುಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿಗೆ ಸೂಚನೆ ನೀಡಿದರು.