Advertisement

ಪುರಸಭೆ: ಕಸದ ಲಾರಿಯಲ್ಲೂ ಮತದಾನ ಜಾಗೃತಿ!

07:05 AM Apr 26, 2018 | Team Udayavani |

ಕುಂದಾಪುರ: ಇಲ್ಲಿನ ಪುರಸಭೆಯ ಕಸದ ಲಾರಿಗಳಲ್ಲೂ ಮತದಾನ ಜಾಗೃತಿಯ ಫ್ಲೆಕ್ಸ್‌ ನೇತಾಡುತ್ತಿದೆ. ಚುನಾವಣೆ ಎಂಬ ಹಬ್ಬ ಬಂತು ಎಂದು ಯಕ್ಷಗಾನದ ಹಾಡು ಕೇಳುತ್ತಿದೆ. ಮತದಾನ ಜಾಗೃತಿಗೆ ಎಲ್ಲೆಡೆ ವಿವಿಧ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವಂತೂ ಮತದಾನ ಪ್ರಮಾಣ ಹೆಚ್ಚವಾಗಲು ಇನ್ನಿಲ್ಲದ ಜಾಗೃತಿ ಅಭಿಯಾನ ನಡೆಸುತ್ತಿದೆ. ಇದಕ್ಕೆ  ಪೂರಕವಾಗಿ ಜಿಲ್ಲಾಡಳಿತ ವಿವಿಧ ರೀತಿಯಲ್ಲಿ ಮತದಾನ ಮಾಡಿ ಎಂದು ಅರಿವು ಮೂಡಿಸುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಕನ್ನಡ ಹಾಗೂ ಕುಂದಗನ್ನಡದಲ್ಲಿ ಮತದಾನ ಮಾಡುತ್ತೇನೆ, ಏನೇ ಕೆಲಸ ಇದ್ದರೂ ಮತದಾನ ಮಾಡಿ ಎಂಬಿತ್ಯಾದಿ ಹೋರ್ಡಿಂಗ್‌ಗಳಿವೆ. 

Advertisement

ಮತಯಂತ್ರ ಹಾಗೂ ವಿವಿ ಪ್ಯಾಟ್‌ ಕುರಿತು ಜಾಗೃತಿ ಅಭಿಯಾನ ನಡೆಯುತ್ತಿದೆ. ಪುರಸಭಾ ವ್ಯಾಪ್ತಿಯ ವಿವಿಧೆಡೆ ಮತಯಂತ್ರಗಳ ಪ್ರಾತ್ಯಕ್ಷಿಕೆ, ಅಣಕು ಮತದಾನ ಮೂಲಕ ಮತಯಂತ್ರ ಮೇಲೆ ಸಂಶಯ ಇದ್ದರೆ ಹೋಗಲಾಡಿಸುವ ಯತ್ನ ನಡೆಯುತ್ತಿದೆ. ಯಂತ್ರದ ಮೂಲಕ ಈ ಹಿಂದೆ ಮತದಾನ ನಡೆದಿದ್ದರೂ ಹೊಸಬರಿಗೆ ಮತಯಂತ್ರದ ಮೂಲಕ ಮತದಾನ ಮಾಡುವುದು ಹೇಗೆ ಎಂಬ ಮಾಹಿತಿ ಬೇಕಿದ್ದರೆ, ಹಳಬರಿಗೆ ಮತಯಂತ್ರದ ಮೂಲಕ ಮತದಾನ ಮಾಡುವುದು ಹೇಗೆ ಎಂದು ನೆನಪಿಲ್ಲದಿದ್ದರೆ ಎಂದು ಜನರಿದ್ದಲ್ಲಿಗೆ ತೆರಳಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. 

ಇಷ್ಟೇ ಅಲ್ಲ ಸಂಘ ಸಂಸ್ಥೆಗಳು ಅವಶ್ಯವಿದೆ ಎಂದು ತಿಳಿಸಿದರೆ ಅವರು ತಿಳಿಸಿದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಮತಯಂತ್ರದ ಪ್ರಾತ್ಯಕ್ಷಿಕೆ ನೀಡಲು ಸಿದ್ಧರಾಗಿದ್ದಾರೆ. ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಹೇಳಲು 24 ತಾಸು ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂನ್ನು ಸಹಾಯಕ ಆಯುಕ್ತರ ಕಚೇರಿಯಲ್ಲಿ ತೆರೆಯಲಾಗಿದೆ. ಪುರಸಭೆಯಲ್ಲೂ ಪ್ರತ್ಯೇಕ ಕಂಟ್ರೋಲ್‌ ರೂಂ ತೆರೆಯಲಾಗಿದೆ.

ಇದಿಷ್ಟೂ ಸಾಲದು ಎಂಬಂತೆ ಇಲ್ಲಿನ ಪುರಸಭೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕಸದ ವಾಹನಗಳು ನಗರದ ಎಲ್ಲೆಡೆ ಸಂಚರಿಸುತ್ತವೆ. ಮನೆ ಮನೆಗೆ ತೆರಳುತ್ತವೆ. ಆಗಲೂ ಜನರಿಗೆ ಕಸ ಹಾಕುವಾಗ ಮತದಾನದ ಜಾಗೃತಿ ಮೂಡಬೇಕೆಂದು ಅದರಲ್ಲೂ ಮತದಾನ ಜಾಗೃತಿ ಫ‌ಲಕ ಅಳವಡಿಸಲಾಗಿದೆ. ಮೈಕ್‌ ವ್ಯವಸ್ಥೆ ಇರುವ ವಾಹನಗಳಲ್ಲಿ ತೆಂಕುತಿಟ್ಟು ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರು ಯಕ್ಷಗಾನೀಯವಾಗಿ ಹಾಡಿರುವ ಮಂಗಳೂರು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್‌. ರವಿ ರಚಿಸಿದ ಹಬ್ಬ ಬಂತು ಹಬ್ಬ ಚುನಾವಣಾ ಹಬ್ಬ ಎಂಬ ಹಾಡನ್ನು ಕೇಳಿಸಲಾಗುತ್ತಿದೆ. 

ಇದು ಸದ್ಯದ ಮಟ್ಟಿಗೆ ಹೊಸ ಪ್ರಯೋಗವೂ ಹೌದು. ಜಿಲ್ಲೆಯ ಯಾವುದೇ ಪುರಸಭೆಗಳು ಇಂತಹ ಪ್ರಯತ್ನ ಮಾಡಿಲ್ಲ. ಈ ಮೊದಲು ಕಸದ , ಸ್ವತ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಸಾಮೂಹಿಕವಾಗಿ ಮತದಾನ ಜಾಗೃತಿ ಉಂಟು ಮಾಡಲಾಗುತ್ತಿದೆ.

Advertisement

ಹಾಡು ಕೇಳುವ ವ್ಯವಸ್ಥೆ
ಜನರಿಗೆ ಮತದಾನದ ಕುರಿತು ಜಾಗೃತಿ ಉಂಟಾಗಬೇಕು.  ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಬೇಕು ಎಂದು ನಾವು ಈ ಪ್ರಯೋಗ ಮಾಡಿದ್ದೇವೆ. 3 ಟ್ರಾಕ್ಟರ್‌, 3 ಏಸ್‌ ವಾಹನ ಸೇರಿದಂತೆ ಒಟ್ಟು 8 ವಾಹನಗಳಲ್ಲಿ ಫ‌ಲಕ ಅಳವಡಿಸಿ ಹಾಡು ಕೇಳಿಸುವ ವ್ಯವಸ್ಥೆ ಮಾಡಿದ್ದೇವೆ. 
– ವಾಣಿ ಬಿ. ಆಳ್ವ,ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next