Advertisement

ಮಂಗಳೂರಿನ ಯುವಕನಿಂದ ಮತದಾನ ಜಾಗೃತಿ

12:35 AM Apr 18, 2019 | Team Udayavani |

ಮಹಾನಗರ: ಮತದಾನ ಮಾಡುವುದಕ್ಕೆ ಊರಿಗೆ ಮರಳುವುದಕ್ಕೆ ಪರವೂರಿನಲ್ಲಿರುವರು ನಿರಾಸಕ್ತಿ ತೋರಿಸುವುದೇ ಹೆಚ್ಚು. ಅಂತಹದ್ದರಲ್ಲಿ, ಮಂಗಳೂರಿನ ಈ ಯುವಕ ಮತದಾನಕ್ಕೆಂದೇ ದೂರದ ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್‌ ಯಾತ್ರೆ ಕೈಗೊಂಡು ಮಾದರಿಯಾಗಿದ್ದಾರೆ.

Advertisement

ಮಂಗಳೂರಿನ ವಾಮಂಜೂರು ಮೂಲದ ಶೇಖರ್‌- ನೀಲಾ ದಂಪತಿಯ ಪುತ್ರ ಅನಿಕೇತ್‌ ಜೆ. ಅವರೇ ಬೆಂಗಳೂರಿನಿಂದ ಮಂಗಳೂರಿಗೆ ಮತದಾನಕ್ಕಾಗಿ ಸೈಕಲ್‌ ಮೂಲಕ ಆಗಮಿಸುತ್ತಿರುವ ಯುವಕ. ಅನಿಕೇತ್‌ ಬೆಂಗಳೂರಿನಲ್ಲಿ ಆ್ಯಡ್‌ ಸಿಂಡಿಕೇಟ್‌ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.

ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಮತದಾನದಂದು ರಜೆ ಇರುವ ಹಿನ್ನೆಲೆಯಲ್ಲಿ ಊರಿನಿಂದ ಹೊರಗಿರುವ ಬಹುತೇಕ ಮಂದಿ ಮತದಾನಕ್ಕೆ ಊರಿಗೆ ಆಗಮಿಸದೆ, ಸ್ನೇಹಿತರೊಂದಿಗೆ ಸೇರಿ ಪಿಕ್‌ನಿಕ್‌, ಟ್ರಕ್ಕಿಂಗ್‌ ಹಮ್ಮಿಕೊಳ್ಳುತ್ತಾರೆ. ಈ ಬಾರಿ ಸಾಲು ಸಾಲು ರಜೆ ಇರುವುದರಿಂದ ಮತದಾನ ಮಾಡುವುದರಿಂದ ತಪ್ಪಿಸಿಕೊಳ್ಳುವವರ ಸಂಖ್ಯೆಯೂ ಇರಬಹುದು.

ಕಳೆದ ಚುನಾವಣೆಗಳ ಅಂಕಿಅಂಶಗಳನ್ನು ಗಮನಿಸಿದರೆ, ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಬೆಂಗಳೂರಿನಲ್ಲಿರುವವರು ಮತ್ತು ಮೂಲತಃ ಬೆಂಗಳೂರಿನವರಾಗಿರುವವರೂ ಮತದಾನವನ್ನು ಹಕ್ಕು ಎಂದು ಪರಿಗಣಿಸಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಮತದಾನದಿಂದ ತಪ್ಪಿಸಿಕೊಳ್ಳದೇ, ಸಮರ್ಥ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಒಂದೊಂದು ಮತವೂ ಅಮೂಲ್ಯ ಎಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನಿಕೇತ್‌ ಅವರು ಸೈಕಲ್‌ ಮೂಲಕವೇ ಮತದಾನಕ್ಕಾಗಿ ಹೊರಟಿದ್ದಾರೆ.

360 ಕಿ.ಮೀ. ಸವಾರಿ
ಬೆಂಗಳೂರಿನಿಂದ ಮಂಗಳೂರಿಗೆ ಸುಮಾರು 360 ಕಿ.ಮೀ. ದೂರವಿದೆ. ಇಷ್ಟೂ ದೂರವನ್ನು ಸೈಕಲ್‌ ಮುಖಾಂತರವೇ ಅನಿಕೇತ್‌ ಕ್ರಮಿಸಲಿದ್ದಾರೆ. ಬುಧವಾರ ಬೆಳಗ್ಗೆ 4.45ಕ್ಕೆ ಬೆಂಗಳೂರಿನಿಂದ ಹೊರಟಿದ್ದು, ಸಂಜೆ ವೇಳೆಗೆ ಹಾಸನ ತಲುಪಿದ್ದಾರೆ. ರಾತ್ರಿ ಹಾಸನದಲ್ಲೇ ಉಳಿದುಕೊಂಡು ಮುಂಜಾವು 3 ಗಂಟೆಗೆ ಹಾಸನ ಬಿಡುತ್ತಾರೆ. ಮತದಾನದ ದಿನವಾದ ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಮಂಗಳೂರಿಗೆ ತಲುಪಬಹುದು ಎನ್ನುತ್ತಾರೆ ಅನಿಕೇತ್‌.

Advertisement

“ನಿಮ್ಮ ಮತ ನಿಮ್ಮ ದನಿ’
29 ವರ್ಷದ ಅನಿಕೇತ್‌ ಅವರು “ನಿಮ್ಮ ಮತ ನಿಮ್ಮ ದನಿ’ ಎಂಬ ಒಕ್ಕಣೆಯನ್ನು ತಮ್ಮ ಜತೆಗಿಟ್ಟುಕೊಂಡು ಸೈಕಲ್‌ ಸವಾರಿಯನ್ನು ಆರಂಭಿಸಿದ್ದಾರೆ. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಜವಾಬ್ದಾರಿ ಎಂದು ಸಾರುವ ಸಲುವಾಗಿ ಈ ಪ್ರಯತ್ನವನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next