Advertisement

ವೃದ್ಧರು, ಅಂಗವಿಕಲರಿಗೆ ಮನೆಯಲ್ಲೇ ಮತದಾನ: ಅಂಗನವಾಡಿ ಸಿಬಂದಿಗೆ ಹೆಚ್ಚುವರಿ ಹೊಣೆ

12:20 AM Apr 10, 2023 | Team Udayavani |

ಉಡುಪಿ: ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಸಂಬಂಧಿಸಿ ಪ್ರಸ್ತುತ ಜಿಲ್ಲೆಯ ಗ್ರಾಮೀಣ ಭಾಗದ ತಳಮಟ್ಟದಲ್ಲಿ ಪೂರ್ವ ತಯಾರಿ ಕೆಲಸಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದೆ. ಈ ನಡುವೆ ಅಂಗನವಾಡಿ ಸಿಬಂದಿಗೆ ಜವಾಬ್ದಾರಿ ಹೆಚ್ಚಾಗಿದೆ.

Advertisement

80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಮನೆಯಿಂದಲೇ ವೋಟು ಮಾಡುವ ಈ ವರ್ಷದ ಹೊಸ ಪರಿಕಲ್ಪನೆಯನ್ನು ಚುನಾವಣ ಆಯೋಗ ಜಾರಿಗೊಳಿಸಿದೆ. ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 46,927 ಹಾಗೂ ಅಂಗವಿಕಲ ಮತದಾರರು 14,007 ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 31 ಸಾವಿರ ಮತದಾರರಿಗೆ ಮತ್ತು 11,751 ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅನುಕೂಲವಾಗಲಿದೆ.

ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒಗಳಾಗಿದ್ದು, ಸದ್ಯ ಒಂದೊಂದು ಗ್ರಾ.ಪಂ.ನಲ್ಲಿ 150ರಿಂದ 200 ಮನೆಗಳಿಗೆ “ಫಾರಂ-12′ ಹಿಡಿದುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಎರಡೆರಡು ಬಾರಿ ಮನೆಗಳಿಗೆ ಓಡಾಡಬೇಕಿದೆ.

ಕಾಡಂಚಿನ ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಓಡಾಟ ತೀರಾ ಕಷ್ಟ. ಮನೆಗಳಲ್ಲಿ ಯಾರೂ ಇಲ್ಲದಿದ್ದರೆ ಮತ್ತೂಮ್ಮೆ ಮನೆಗಳಿಗೆ ತೆರಳಿ ಫಾರಂ ಭರ್ತಿ ಮಾಡಿ ಪಡೆಯಬೇಕು. ಮನೆಯಲ್ಲೇ ವೋಟು ಮಾಡುತ್ತೀರಾ? ಮತಗಟ್ಟೆಗೆ ತೆರಳಿ ವೋಟು ಹಾಕುತ್ತೀರಾ? ಎಂದು ಕೇಳಿ ವಾಹನ, ವೀಲ್‌ಚೇರ್‌ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸ ಈ ಬಿಎಲ್‌ಒಗಳಿಂದ ನಡೆಯುತ್ತಿದೆ. ತತ್‌ಕ್ಷಣಕ್ಕೆ ರಿಪೋರ್ಟ್‌ ಮಾಡುವುದು, ತಾಲೂಕು ಕಚೇರಿಗಳಿಗೆ ಹಾಜರಾಗಿ ಮಾಹಿತಿ ನೀಡುವುದನ್ನು ಬಿಎಲ್‌ಒಗಳು ನಿರ್ವಹಿಸಬೇಕಿದೆ.

ಬಹುತೇಕ ಅಂಗನವಾಡಿಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ. ಇಂಥ ಅಂಗನವಾಡಿಗಳಲ್ಲಿ ಎರಡು ಕೆಲಸಗಳನ್ನು ಕಾರ್ಯಕರ್ತೆಯರು ನಿರ್ವಹಿಸುವುದು ಸವಾಲು ಮತ್ತು ಒತ್ತಡದಿಂದ ಕೂಡಿದೆ ಎನ್ನುತ್ತಾರೆ ಅಂಗನವಾಡಿ ಸಿಬಂದಿ.

Advertisement

ಚುನಾವಣೆ ಕರ್ತವ್ಯವನ್ನು ಹೆಮ್ಮೆ, ಖುಷಿಯಿಂದ ಮಾಡುತ್ತೇವೆ. ಎರಡು ಒತ್ತಡಗಳ ನಡುವೆ ಮೇಲಧಿಕಾರಿಗಳ ಸೂಚನೆಯಂತೆ ನಿರ್ದಿಷ್ಟ ಸಮಯದೊಳಗೆ ವಹಿಸಿದ ಜವಾಬ್ದಾರಿ ಕೆಲವು ಸಲ ಪೂರ್ಣಗೊಳ್ಳುವುದಿಲ್ಲ ಎಂಬ ಆತಂಕ ನಮ್ಮದು ಎಂಬುದು ಕೆಲವು ಬಿಎಲ್‌ಒ ಜವಾಬ್ದಾರಿ ಹೊಂದಿರುವ ಅಂಗನವಾಡಿ ಸಿಬಂದಿ ಅಭಿಪ್ರಾಯವಾಗಿದೆ.

ಪ್ರಸ್ತುತ ಚುನಾವಣೆಯಲ್ಲಿ ಇದೊಂದು ಪರಿಕಲ್ಪನೆಯಾಗಿದ್ದು, ಇತರ ಇಲಾಖೆ ಸಿಬಂದಿಯನ್ನು ಈ ಸೇವೆಗೆ ನಿಯೋಜಿಸಿ ಇನ್ನಷ್ಟು ವ್ಯವಸ್ಥಿತ, ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಆಯೋಗದ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಸಾಮಾನ್ಯರ ಅನಿಸಿಕೆಯಾಗಿದೆ.

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next