Advertisement
ಲೋಕಸಭೆ, ವಿಧಾನಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ ಮತದಾನದ ಮೂಲಕ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ವಿ.ಸಭಾ ಕ್ಷೇತ್ರ ಜಿಲ್ಲೆಯಲ್ಲಿಯೇ ಗುರುತಿಸಿ ಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಈ ಎರಡೂ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆ. ವಿಶೇಷವೆಂದರೆ, ಈ ಎರಡೂ ಕ್ಷೇತ್ರಗಳಲ್ಲಿ ಪಾಲಿಕೆಯ ವಾರ್ಡ್‌ಗಳು ಇರುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ವೇಳೆಗೆ ಮತ್ತೂಮ್ಮೆ ಮತದಾರರನ್ನು ಮತಗಟ್ಟೆಗಳಿಗೆ ಕರೆತರುವುದು ಚುನಾವಣ ಆಯೋಗಕ್ಕೆ ಬಹುದೊಡ್ಡ ಸವಾಲಿನ ಕೆಲಸ.
Related Articles
2013 ಮಾ. 7ರಂದು ಪಾಲಿಕೆ ಚುನಾವಣೆ ನಡೆದಿದ್ದು, ಮುಂದಿನ ಚುನಾವಣೆ ಈ ವರ್ಷದ ಮಾರ್ಚ್ ವೇಳೆಗೆ ನಡೆಯಬೇಕಿತ್ತು. ಆದರೆ, ಸರಕಾರ ಪ್ರಕಟಿಸಿದ ಮೀಸಲಾತಿಯು ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು.
Advertisement
ಇದನ್ನು ಪರಿಶೀಲಿಸಿದ ನ್ಯಾಯಾಲಯ ಮೀಸಲಾತಿ ಮರು ಪರಿಷ್ಕರಿಸುವಂತೆ ಸೂಚಿಸಿತ್ತು. ಆದರೆ, ಆ ವೇಳೆಗಾಗುವಾಗಲೇ ಲೋಕ ಸಭಾ ಚುನಾವಣೆಗೆ ರಾಜಕೀಯ ಲೆಕ್ಕಾ ಚಾರಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೀಸಲಾತಿ ಮರು ಪರಿಷ್ಕರಣೆಯನ್ನು ಲೋಕಸಭಾ ಚುನಾವಣೆಯ ಬಳಿಕ ನಡೆಸುವ ಬಗ್ಗೆ ಯೋಚಿಸಿತು. ಆ ಸಂದರ್ಭ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿ ನೀತಿ ಸಂಹಿತೆ ಜಾರಿಗೆ ಬಂತು.
ಮತ ಎಣಿಕೆ ನಡೆಯಲಿರುವ ಮೇ 23ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆ ಬಳಿಕ ರಾಜ್ಯಸರಕಾರ ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣೆ ನಡೆಸಲಿದೆ. ಮುಂದೆ ಮಳೆಗಾಲ ಇರುವ ಕಾರಣದಿಂದ ಸೆಪ್ಟಂಬರ್ ವೇಳೆಗೆ ಮನಪಾ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇನ್ನು ಬಿಜೆಪಿ, ಕಾಂಗ್ರೆಸ್‌ಗೆ ಮನಪಾ ಚುನಾವಣೆಯೇ ಪ್ರತಿಷ್ಠೆಯ ಕಣವಾಗಿದೆ. ಕೈತಪ್ಪಿದ ಪಾಲಿಕೆ ಅಧಿಕಾರವನ್ನು ಮರುಪಡೆಯಲು ಬಿಜೆಪಿ ಹವಣಿಸಿದ್ದರೆ, ಕಾಂಗ್ರೆಸ್ ಮತ್ತೂಮ್ಮೆ ಅಧಿಕಾರ ಸೂತ್ರ ಪಡೆಯಲು ಪ್ರಯತ್ನಿಸುತ್ತಿದೆ. ಈ ಸಂಬಂಧ ವಾರ್ಡ್‌ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಚಟುವಟಿಕೆಗಳು ಆರಂಭವಾಗಿವೆ. ಮನಪಾ ಆಡಳಿತ ದೊರೆಯಬೇಕೆಂಬ ಹಠದಿಂದ ಎರಡೂ ಪಕ್ಷಗಳು ಇದೀಗ ರಾಜಕೀಯ ತಾಲೀಮು ಶುರುಮಾಡಿದೆ.
ಚುನಾವಣ ಪ್ರಚಾರ-ಮನಪಾ ಸೀಟು!ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿಯ ಮಾಜಿ ಕಾರ್ಪೊರೇಟರ್‌ಗಳು ತಮ್ಮ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದರು. ಒಂದು ವೇಳೆ ಪಕ್ಷದ ಪರವಾಗಿ ಮತಯಾಚಿಸದಿದ್ದರೆ ಮುಂದಿನ ಪಾಲಿಕೆ ಚುನಾವಣೆಯ ಟಿಕೆಟ್ ಸಿಗುವ ಬಗ್ಗೆ ಆತಂಕ ಅವರಲ್ಲಿತ್ತು. ಹೀಗಾಗಿ ಕೆಲವು ವಾರ್ಡ್ ವ್ಯಾಪ್ತಿಯಲ್ಲಿ ಮಾಜಿ ಕಾರ್ಪೊರೇಟರ್‌ಗಳು ಬೆಂಬಲಿಗರನ್ನು ಸೇರಿಸಿಕೊಂಡು ಬಹಳಷ್ಟು ಬಿರುಸಿನ ಪ್ರಚಾ ರ ಮಾಡಿದ್ದರು. ಇಷ್ಟಿದ್ದರೂ, ಕೆಲವು ಮಾಜಿ ಕಾರ್ಪೊರೇಟರ್‌ಗಳು ಮಾತ್ರ ಪ್ರಚಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿಲ್ಲ. ಇನ್ನೂ ಕೆಲವರು ಪಕ್ಷದ ನಾಯಕರನ್ನು ಮೆಚ್ಚಿಸುವ ಕಾರಣಕ್ಕಾಗಿ ಒಂದೆರಡು ಮನೆಗಳಿಗೆ ಭೇಟಿ ನೀಡಿ ಪ್ರಚಾರದ ಫೋಟೋ ತೆಗೆದು ಸಾಮಾಜಿಕ ಜಾಲತಾಣ-ಪಕ್ಷದ ವಾಟ್ಸಾಪ್‌ಗ್ಳಲ್ಲಿ ಹಾಕಿ ಪ್ರಚಾರದಲ್ಲಿ ಇರುವ ಬಗ್ಗೆ ಗೊತ್ತುಪಡಿಸುತ್ತಿದ್ದರು. ಇದೆಲ್ಲದರ ಮಧ್ಯೆ ಮನಪಾ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷ ಕಾಂಗ್ರೆಸ್‌ನ ರಾಧಾಕೃಷ್ಣ ಅವರು ಲೋಕಸಭಾ ಚುನಾವಣೆಯ ಪ್ರಚಾರ ಪರಾಕಾಷ್ಟೆಯಲ್ಲಿರುವ ಹಂತದಲ್ಲಿಯೇ ದಿಢೀರ್ ಆಗಿ ಪಕ್ಷಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದರು. ಮನಪಾ; 2013ರಲ್ಲಿ ಶೇ.63.29 ಮತದಾನ
60 ವಾರ್ಡ್‌ಗಳನ್ನು ಹೊಂದಿರುವ ಮಂಗಳೂರು ಪಾಲಿಕೆಗೆ 2013ರ ಮಾ. 7ರಂದು ಚುನಾವಣೆಯಲ್ಲಿ ಶೇ. 63.28ರಷ್ಟು ಮತದಾನವಾಗಿತ್ತು. ಅಂದು ಒಟ್ಟು 3,22,293 ಮತದಾರರಲ್ಲಿ 2,07,070 ಮತದಾರರು ಮತ ಚಲಾಯಿಸಿದ್ದರು. 52ನೇ ಕಣ್ಣೂರು ವಾರ್ಡ್‌ನಲ್ಲಿ ಗರಿಷ್ಠ ಶೇ.75.75 ಮತದಾನವಾದರೆ 38ನೇ ಬೆಂದೂರು ವಾರ್ಡ್‌ನಲ್ಲಿ ಕನಿಷ್ಠ ಶೇ. 47.35 ಮತದಾನವಾಗಿತ್ತು. 2007 ಸೆ. 28ರಂದು ನಡೆದ ಮನಪಾ ಚುನಾವಣೆಯಲ್ಲಿ ಕೇವಲ ಶೇ. 60.85ರಷ್ಟು ಮತದಾನವಾಗಿತ್ತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 38, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ಪಾಲಿಕೆಯ ವಾರ್ಡ್‌ಗಳಿವೆ.