Advertisement

ಕೆಲಸ ಮಾಡಿದರಷ್ಟೇ ಗೆಲ್ಲಿಸುತ್ತಾನೆ ಮತದಾರ

10:55 PM Dec 08, 2022 | Team Udayavani |

ಇಡೀ ದೇಶಾದ್ಯಂತ ಗಮನ ಸೆಳೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫ‌ಲಿತಾಂಶ ಹೊರಬಿದ್ದಿದ್ದು, ಗುಜರಾತ್‌ನಲ್ಲಿ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಜಯಗಳಿಸಿವೆ. ಜನರ ನಿರೀಕ್ಷೆಯಂತೆ ಕೆಲಸ ಮಾಡಿದರೆ ಮಾತ್ರ ಮತದಾರ ಒಲಿಯುತ್ತಾನೆ ಎನ್ನುವುದು ಈ ಫ‌ಲಿತಾಂಶ ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಹಾಗೆಯೇ, ಜನರ ವಿಶ್ವಾಸ ಕಳೆದುಕೊಂಡರೆ ತಕ್ಕ ಪಾಠ ಕಲಿಸಿಯೇ ತೀರುತ್ತಾನೆ ಎಂಬುದು ಈ ಫ‌ಲಿತಾಂಶದಲ್ಲಿ ಜಾಹೀರಾಗಿದೆ. ಹಾಗೆಯೇ, ಮತದಾರ ಯಾರ ಮರ್ಜಿಗೂ ಒಳಗಾಗದೇ, ತನಗೆ ಬೇಕಾದವರನ್ನು ಆಯ್ಕೆ ಮಾಡುತ್ತಾನೆ ಎಂಬ ಸಂಗತಿಯೂ ಈ ಫ‌ಲಿತಾಂಶದಲ್ಲಿ ಗೋಚರವಾಗಿದೆ.

Advertisement

ಗುಜರಾತ್‌ನಲ್ಲಿ ಬಿಜೆಪಿ ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರುತ್ತಿರುವುದು ವಿಶೇಷ. ಈ ರಾಜ್ಯದಲ್ಲಿ ಯಾವುದೇ ಪಕ್ಷ ಇಷ್ಟೊಂದು ಅವಧಿಗೆ ಆಯ್ಕೆಯಾಗಿರಲಿಲ್ಲ. ಅಷ್ಟೇ ಅಲ್ಲ, ಹಿಂದೆಂದೂ ಇಲ್ಲದ ರೀತಿಯಲ್ಲಿ 182 ಕ್ಷೇತ್ರಗಳಲ್ಲಿ ಬಿಜೆಪಿಯೊಂದೇ 156 ಕ್ಷೇತ್ರಗಳಲ್ಲಿ ಜಯಗಳಿಸಿರುವುದೂ ವಿಶೇಷ. ಇಲ್ಲಿ ಅಭಿವೃದ್ಧಿಯ ಜತೆ ಜತೆಗೇ ಪ್ರಧಾನಿ ಮೋದಿ ಅವರ ವರ್ಚಸ್ಸು ಕೂಡ ಕೆಲಸ ಮಾಡಿದೆ ಎಂಬುದು ಸುಳ್ಳೇನಲ್ಲ.

ಆದರೂ, ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣಾ ಫ‌ಲಿತಾಂಶಗಳು ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಿವೆ ಎಂಬುದು ಬಹಿರಂಗವಾಗಿದೆ. ಅಂದರೆ, ಗುಜರಾತ್‌ನಲ್ಲಿ ಒಂದು ವರ್ಷದ ಹಿಂದೆಯೇ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತು ಎಂಬುದು ಗೊತ್ತಾಗಿತ್ತು. ಆಗ ಇವರು ಮಾಡಿದ ಮೊದಲ ಕೆಲಸವೆಂದರೆ, ಮುಖ್ಯಮಂತ್ರಿಯಾದಿಯಾಗಿ ಸರ್ಕಾರದಲ್ಲಿದ್ದ ಎಲ್ಲ ಸಚಿವರನ್ನು ಬದಲಾವಣೆ ಮಾಡಿ ಹೊಸ ಮುಖ್ಯಮಂತ್ರಿ ಮತ್ತು ಹೊಸ ಸಂಪುಟ ತಂದಿದ್ದು. ಈ ಮೂಲಕ ಜನರಲ್ಲಿದ್ದ ಆಡಳಿತ ವಿರೋಧಿ ಭಾವನೆಯನ್ನು ಕೊಂಚ ಮಟ್ಟಿಗಾದರೂ, ತಣ್ಣಗೆ ಮಾಡುವ ಕೆಲಸವನ್ನು ಬಿಜೆಪಿ ಮಾಡಿತ್ತು.

ಆದರೆ, ಈ ವಿಚಾರವನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ಎಡವಿತು. ಚುನಾವಣೆಗೆ ಇನ್ನೊಂದು ವರ್ಷವಿದೆ ಎಂಬ ಸಮಯದಲ್ಲಿ ಇಡೀ ಮಂತ್ರಿಮಂಡಲವನ್ನೇ ಬದಲಾವಣೆ ಮಾಡಿದ್ದು ಏಕೆ ಎಂಬ ಬಗ್ಗೆ ಜನರ ಮುಂದೆ ಸಮರ್ಥವಾಗಿ ಮಾಹಿತಿ ಇಡಬಹುದಾಗಿತ್ತು. ಹಾಗೆಯೇ ಇದನ್ನೇ ಚುನಾವಣೆ ವಿಷಯವನ್ನಾಗಿ ಮಾಡಿಕೊಂಡು ಹೋಗಬಹುದಾಗಿತ್ತು. ಆದರೆ, ಎಲ್ಲೋ ಒಂದು ಕಡೆಯಲ್ಲಿ ಕಾಂಗ್ರೆಸ್‌ ಚುನಾವಣೆಗೆ ಮುನ್ನವೇ ಸೋತಂತೆ ಬಿಂಬಿಸಿಕೊಂಡು, ತನ್ನ ಎಂದಿನ ನಂಬಿಕಸ್ತ ಮತಬ್ಯಾಂಕ್‌ ಅನ್ನೂ ಕಳೆದುಕೊಂಡು ಬಿಟ್ಟಿತು. ಈ ಮೂಲಕ ಕಾರ್ಯಕರ್ತರಲ್ಲಿಯೂ ಗೊಂದಲ ತುಂಬಿತು ಎನ್ನಬಹುದು. ಹಾಗೆಯೇ, ಸೂರತ್‌ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೊಂಚ ಆಶಾಭಾವ ಹುಟ್ಟಿಸಿದ್ದ ಆಮ್‌ ಆದ್ಮಿ ಪಕ್ಷ,  ಬಾರಿ ವಿಧಾನಸಭೆಗೆ ಪ್ರವೇಶಿಸಿರುವುದು ಆ ಪಕ್ಷದ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ. ಗುಜರಾತ್‌ನಲ್ಲಿ ಬಿಜೆಪಿಗೆ ಪರ್ಯಾಯ ಎಂಬಂತಿದ್ದ ಕಾಂಗ್ರೆಸ್‌ನ ಸ್ಥಾನವನ್ನು ಅದು ತುಂಬಿಕೊಳ್ಳುವತ್ತ ಹೊರಟಿದೆ. ವ್ಯವಸ್ಥಿತವಾಗಿ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಹೊರಟರೆ ಮುಂದಿನ ದಿನಗಳಲ್ಲಿ ಭವಿಷ್ಯ ಕಾಣಬಹುದು ಎಂಬುದನ್ನು ಆರಾಮಾಗಿ ಹೇಳಬಹುದು.

ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ಕಾಂಗ್ರೆಸ್‌ಗೆ ಗಟ್ಟಿ ನಾಯಕರಿಲ್ಲದಿದ್ದರೂ, ಆಡಳಿತ ಪಕ್ಷದ ವಿರುದ್ಧದ ಜನರಲ್ಲಿನ ಸಿಟ್ಟು ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಿದೆ. ಹಾಗೆಯೇ, ಇಲ್ಲಿ ಪ್ರಧಾನಿ ಮೋದಿಯವರೇ ಡಬಲ್‌ ಎಂಜಿನ್‌ ಸರ್ಕಾರವಿದ್ದರೆ ಆಡಳಿತಕ್ಕೆ ಉತ್ತಮ ಎಂದು ಹೇಳಿದ್ದರೂ, ಜನ ಕೇಳಿಲ್ಲ. ಅಂದರೆ, ಸ್ಥಳೀಯ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡಿದರೆ ಮಾತ್ರ ನಾವು ಕೈ ಹಿಡಿಯುತ್ತೇವೆ ಎಂಬುದನ್ನು ನಿಚ್ಚಳವಾಗಿ ಜನ ಸಾಬೀತು ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next