ಮಾಗಡಿ: ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಲ್ಲ ಮತದಾರರು ಮತದಾನ ಮಾಡಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಾಪಂ ಇಒ ಚಂದ್ರ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಎಸ್‌ವಿಇಇಪಿ ಸಮಿತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಬಾಹಿರ ಹಾಗೂ ಪಕ್ಷ ಪರವಾಗಿ ಎಲ್ಲೂ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.
ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಿ: ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಪಿಡಿಒಗಳು ತಮ್ಮ ಸಿಬ್ಬಂದಿ, ಅಧಿಕಾರಿಗಳ ಸಹಕಾರದಿಂದ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಪ್ರತ್ಯೇಕ ಕಾರ್ಯಕ್ರಮವನ್ನ ಸಹ ಆಯೋಜಿಸಬಹುದು. ಈ ಮೂಲಕ ಮತದಾನದ ಜಾಗೃತಿ ಮೂಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮತದಾರರಲ್ಲಿ ಮೂಡಬೇಕು. ಒಬ್ಬ ಉತ್ತಮ ನಾಯಕನ ಆಯ್ಕೆ ಅವರದಾಗಬೇಕು. ಈ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಮತದಾನದ ಚಿತ್ರ ಪ್ರದರ್ಶನ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದೇಶ್ವರ್ ಮಾತನಾಡಿ, ಮಾ.18ರಿಂದ ಏ.15ರವರೆಗೆ ಮತದಾನದ ಕುರಿತು ಮತದಾರರಲ್ಲಿ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ಆಯೋಜಿಸಬೇಕು. ಏ.9ರಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರಿಗೆ ವಿದ್ಯಾರ್ಥಿಗಳಿಗೆ ಮತದಾನ ಕುರಿತು ಚಿತ್ರ ಪ್ರದರ್ಶನದ ಮೂಲಕ ಅವರಲ್ಲಿ ಅರಿವು ಮೂಡಿಸಲಾಗುವುದು. ಇದಕ್ಕೆ ಶಿಕ್ಷಕರು, ಪೋಷಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರ ನೀಡಬೇಕು ಎಂದರು.
ಪುರಸಭೆಯಿಂದ ಬೈಕ್‌ರ್ಯಾಲಿ: ಏ.10 ಮತ್ತು 11 ಹಾಗೂ 12ರಂದು ಪಟ್ಟಣದ ಪುರಸಭೆಯಿಂದ ಕಲ್ಯಾಗೇಟ್‌ವರೆವಿಗೂ ಬೈಕ್‌ರ್ಯಾಲಿ ನಡೆಯಲಿದೆ. ಏ.15ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ಬಾಧ್ಯತೆ, ಮತದಾನದ ಅರಿವು ಮೂಡಿಸಬೇಕಿದೆ. ಮತದಾನ ಪ್ರತಿಯೊಬ್ಬರ ಮತದಾರರ ಹಕ್ಕು, ತಮ್ಮ ಹಕ್ಕನ್ನು ಅನುಷ್ಠಾನಗೊಳಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ವೇಳೆ ಅಧಿಕಾರಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ನಾಗರಾಜು, ಸಹಾಯಕ ಕೃಷಿ ನಿರ್ದೇಶಕ ಅಶೋಕ್, ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ, ಆರೊಗ್ಯಾಧಿಕಾರಿ ಶಶಿಕಲಾ, ಸಿಡಿಪಿಒ ಭಾರತಿದೇವಿ, ಸಹಾಯಕ ಪಶು ನಿರ್ದೇಶಕ ಜರ್ನಾಧನ, ತಾಪಂ ಸಹಾಯಕ ನಿರ್ದೇಶಕ ನವೀನ್ ಕುಮಾರ್, ಪಿಡಿಒಗಳು ಹಾಜರಿದ್ದರು.