Advertisement

ಮತದಾರರ ದಾಖಲಾತಿ ಜಪ್ತಿ

12:20 AM Apr 17, 2019 | Team Udayavani |

ಬೆಂಗಳೂರು: ಅನಧಿಕೃತವಾಗಿ ಎಪಿಕ್‌ ಕಾರ್ಡ್‌ಗಳು, ಮತದಾರರ ಪಟ್ಟಿಗಳನ್ನು ಸಂಗ್ರಹಿಸಿಟ್ಟ ಆರೋಪದ ಹಿನ್ನೆಲೆಯಲ್ಲಿ ಗಣೇಶ ಮಂದಿರ ವಾರ್ಡ್‌ನ ವೇಣುಗೋಪಾಲ್‌ ಎಂಬವರ ಮನೆ ಮೇಲೆ ದಾಳಿ ನಡೆಸಿದ ಚುನಾವಣಾ ವೀಕ್ಷಕರ ತಂಡ, ಮತದಾರರ ದಾಖಲೆಗಳೊಂದಿಗೆ 1.38 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ.

Advertisement

ಖಚಿತ ಮಾಹಿತಿ ಮೇರೆಗೆ ಸಹಾಯಕ ಚುನಾವಣಾಧಿಕಾರಿ ಡಾ.ದಾಸೇಗೌಡ ನೇತೃತ್ವದಲ್ಲಿ ಸೋಮವಾರ ತಡರಾತ್ರಿ 12.30ರ ಸುಮಾರಿಗೆ ತಂಡ ದಾಳಿ ನಡೆಸಿತು. ಈ ವೇಳೆ 82 ಎಪಿಕ್‌ ಕಾರ್ಡ್‌ಗಳು, 500 ಕರಪತ್ರಗಳು, ಹತ್ತಕ್ಕೂ ಹೆಚ್ಚು ಮತದಾರರ ಪಟ್ಟಿಗಳು, 1.38 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಅದೆಲ್ಲವನ್ನೂ ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನಮ್ಮನ ಅಚ್ಚುಕಟ್ಟು ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಕರಪತ್ರಗಳು ಬಿಜೆಪಿ ಅಭ್ಯರ್ಥಿಗೆ ಸಂಬಂಧಿಸಿದ್ದಾಗಿವೆ. ಎಪಿಕ್‌ ಕಾರ್ಡ್‌, ಮತದಾರರ ಪಟ್ಟಿಗಳು ಉದ್ದೇಶಿತ 165ನೇ ವಾರ್ಡ್‌ (ಗಣೇಶಮಂದಿರ ವಾರ್ಡ್‌) ಸುತ್ತಲಿನ ಮತದಾರರಿಗೆ ಸೇರಿದ್ದವು. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸಂಬಂಧಿಸದ ಸಗಟು ರೂಪದಲ್ಲಿ ಹೀಗೆ ಮತದಾರರ ವಿವರ ಸಂಗ್ರಹಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ದಾಸೇಗೌಡ ಸ್ಪಷ್ಟಪಡಿಸಿದರು.

ಕಾರ್ಪೊರೇಟರ್‌ ಮನೆ ಮೇಲೆ ದಾಳಿ: ಅದೇ ರೀತಿ, ಮಂಗಳವಾರ ರಾತ್ರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಾರಪ್ಪನಪಾಳ್ಯ (ವಾರ್ಡ್‌ ಸಂಖ್ಯೆ 44)ದಲ್ಲಿ ಪಾಲಿಕೆ ಸದಸ್ಯ ಎಂ.ಮಹದೇವ ಎಂಬುವರ ಮನೆ ಮೇಲೆ ಕೂಡ ಚುನಾವಣಾಧಿಕಾರಿಗಳು ದಾಳಿ ನಡೆಸಿದರು.

“ಮತದಾರರಿಗೆ ದಿನ ನಿತ್ಯದ ಬಳಕೆಯ ವಸ್ತುಗಳನ್ನು ನೀಡುವ ಮೂಲಕ ಆಮಿಷವೊಡ್ಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಆದರೆ, ಈ ವೇಳೆ ಆಮಿಷವೊಡ್ಡುವಂತಹ ಯಾವುದೇ ಸಾಮಗ್ರಿ ಪತ್ತೆಯಾಗಿಲ್ಲ’ ಎಂದು ಸಹಾಯಕ ಚುನಾವಣಾಧಿಕಾರಿ ವಿಜಯಾ ಈ. ರವಿಕುಮಾರ್‌ ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next