ಬೆಂಗಳೂರು: ಕೆಲವು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಸಹಿತ ಬಹಳಷ್ಟು ಮಂದಿಯ ಹೆಸರನ್ನು ಸಾಮೂಹಿಕವಾಗಿ ಮತದಾರರ ಪಟ್ಟಿ ಯಿಂದ ಕೈಬಿಡಲಾಗಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶವಿರುವ ಅನುಮಾನ ಮೂಡಿದೆ ಎಂದು ಆರೋ ಪಿಸಿರುವ ಬಿಜೆಪಿಯು ಕೂಡಲೇ ಪರಿಶೀಲಿಸಿ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾದ ಶಾಸಕ ಸಿ.ಟಿ.ರವಿ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.
ಬಳಿಕ ಮಾತನಾಡಿದ ಸಿ.ಟಿ.ರವಿ, ನಮ್ಮ ಮನವಿಗೆ ಮುಖ್ಯ ಚುನಾವಣಾಧಿಕಾರಿಗಳು ಸ್ಪಂದಿಸಿದ್ದು ಈ ರೀತಿ ಎಲ್ಲೇ ನಡೆದಿದ್ದರೂ ಮಾ. 16ರೊಳಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಧ್ವಜ ತೆರವಿಗೆ ಆದೇಶ ನೀಡಿಲ್ಲ
ಚಿಕ್ಕಮಗಳೂರು, ಉಡುಪಿಯ ಕೆಲವೆಡೆ ಧಾರ್ಮಿಕ ಕೇಂದ್ರಗಳ ಮೇಲಿನ ಧ್ವಜಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿರುವುದನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಾಗ ಈ ಸಂಬಂಧ ಯಾವುದೇ ಆದೇಶ ನೀಡಿಲ್ಲ ಮತ್ತು ಈ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದರು ಎಂದರು. ಸಾರ್ವಜನಿಕರು ತಮ್ಮದೇ ಸ್ವಂತ ಆಸ್ತಿ, ಕಟ್ಟಡದ ಮೇಲೆ ಧ್ವಜ ಹಾರಿಸಲು ಅನುಮತಿ ಪಡೆಯಬೇಕು ಎಂಬುದು ಎಷ್ಟು ಸರಿ ಎಂಬ ಬಗ್ಗೆ ಚುನಾವಣಾಧಿಕಾರಿಯವರಲ್ಲಿ ಪ್ರಶ್ನಿಸಿ ದಾಗ ಕರ್ನಾಟಕ ನಿಯಮ ವೊಂದರಲ್ಲಿ ಇದಕ್ಕೆ ಅವಕಾಶವಿದ್ದು, ಸರಕಾರವೇ ಸೂಕ್ತ ಸುತ್ತೋಲೆ ಹೊರಡಿಸಿ ಸರಿಪಡಿಸ ಬಹುದು ಎಂದವರು ಹೇಳಿದ್ದಾರೆ. ಅಲ್ಲದೆ ಆಯೋಗದ ಆ್ಯಪ್ ಸೇವೆ ಸ್ಥಗಿತಗೊಂಡಿರುವ ಬಗ್ಗೆಯೂ ಗಮನ ಸೆಳೆಯಲಾಯಿತು ಎಂದು ಹೇಳಿದರು.
ಅಕ್ರಮ ವಲಸಿಗರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿರುವುದಾಗಿ ತಿಳಿಸಿದ ಸಿ. ಟಿ. ರವಿ, ಸಾಮಾಜಿಕ ಜಾಲ ತಾಣದಲ್ಲಿ ಪಕ್ಷ ಮತ್ತು ಅಭ್ಯರ್ಥಿ ಪರ ಜಾಹೀರಾತು ನೀಡುವುದನ್ನು ನಿರ್ಬಂಧಿಸಲಾಗಿದೆಯೇ ಹೊರತು ಇತರ ಮಾಹಿತಿ ಹಂಚಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಬಗ್ಗೆ ಗೊಂದಲ ಮೂಡಿರುವುದನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.