Advertisement

ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವವರನ್ನು ಮತದಾರರು ಸೋಲಿಸಬೇಕು: ಸಚಿವ ಮಧು ಬಂಗಾರಪ್ಪ

06:02 PM Jan 20, 2024 | Team Udayavani |

ಕಾರವಾರ : ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವವರನ್ನು ಮತದಾರರು ಸೋಲಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಅಂಕೋಲಾದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಸುದೀರ್ಘವಾಗಿ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಹಾಗೂ ಲೋಕಸಭಾ ಚುನಾವಣಾ ಸಿದ್ದತೆ ಕುರಿತು ಮಾತನಾಡಿದರು‌ .

ಸಂವಿಧಾನ ಬದಲಿಸುವ ಮಾತುಗಳನ್ನಾಡುವ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿರೋಧಿಸುವ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಗೆ ಸಹ ಬಿಜೆಪಿ ಟಿಕೆಟ್ ಕೊಡಬೇಕು. ಆಗ ಅವರಿಗೆ ಮತದಾರರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಧರ್ಮ ಪ್ರೀತಿಸುವ ಜನರು ಕರಾವಳಿ ಭಾಗದಲ್ಲಿ ಹೆಚ್ಚಿದ್ದಾರೆ. ಅವರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಕೆಟ್ಟ ಗುಣ. ಹಿಂದಿನಂತೆ ಕೋಮು ಧ್ರುವೀಕರಣದ ಚಟುವಟಿಕೆಗೆ ಈ ಬಾರಿ ಅವಕಾಶ ಸಿಗದು ಎಂದು ಹೇಳಿದರು‌.

ನಾಲ್ಕು ವರ್ಷ ಜನರಿಂದ ದೂರವಿದ್ದು ಚುನಾವಣೆ ಸಮೀಪಿಸಿದಾಗ ಸಮಾಜದ ಸಾಮರಸ್ಯ ಕದಡುವ ಮಾತುಗಳನ್ನಾಡವವರನ್ನು ಮತದಾರರು ದೂರ ಇಡಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆಯಲ್ಲಿ ಐದು ಗ್ಯಾರಂಟಿ ಭರವಸೆ ನೀಡಿ ಗೆಲುವು ಸಾಧಿಸಿದ್ದೆವು. ಭರವಸೆ ಈಡೇರಿಸಿದ ವಿಶ್ವಾಸದಲ್ಲಿ ಲೋಕಸಭೆ ಚುನಾವಣೆಗೆ ಮತ ಕೇಳುತ್ತೇವೆ . ಮತದಾರರು ಗೆಲುವು ನೀಡುವ ನಂಬಿಕೆ ಇದೆ ಎಂದರು.

Advertisement

ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಆರು ಜಿಲ್ಲೆಗಳಲ್ಲಿ ಓಡಾಟ ನಡೆಸಿ ಪಕ್ಷ ಸಂಘಟಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಅದನ್ನು ನಿಷ್ಠೆಯಿಂದ ನಿಭಾಯಿಸುವೆ ಎಂದರು.

ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕಾತಿಗೆ ಹಂತ ಹಂತವಾಗಿ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ . ಪ್ರತಿ ವರ್ಷ ಹತ್ತು ಸಾವಿರ ಶಿಕ್ಷಕರ ನೆಮಕಾತಿಗೆ ಅವಕಾಶ ಇದರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರತಿ ವರ್ಷ ರಾಜ್ಯದಲ್ಲಿ 20 ಸಾವಿರ ಶಿಕ್ಷಕರಿಗೆ ಇಂಗ್ಲಿಷ್ ಕಲಿಕೆ , ಕಂಪ್ಯೂಟರ್ ತಾಂತ್ರಿಕ ತರಬೇತಿ ನೀಡಲು ಅಜೀಂ ಪ್ರೇಮ್’ಜಿ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಶಿಕ್ಷಕರಿಗೆ ತರಬೇತಿ ಆರಂಭವಾಗಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆಗೆ ಮುನ್ನ   ಗ್ಯಾರಂಟಿ ಯೋಜನೆ ರೂಪಿಸುವ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಜನರ ಅಭಿಪ್ರಾಯ ಆಲಿಸಿ ಅವರ ಅಗತ್ಯತೆಗೆ ತಕ್ಕಂತೆ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವು ಎಂದರು.

4.5 ಜನರಿಗೆ ಅನುಕೂಲವಾಗುವ ಯೋಜನೆ ಜಾರಿಯಾದಾಗ ಸಣ್ಣ ಪುಟ್ಟ ನ್ಯೂನತೆ ಸಹಜ. ಆದರೆ ಬಹುದೊಡ್ಡ ಸಂಖ್ಯೆಯಲ್ಲಿ ಬಡವರು, ಅಶಕ್ತರಿಗೆ ಗ್ಯಾರಂಟಿ ಯೋಜನೆಗಳು ನೆರವಾಗಿವೆ ಎಂದರು.

ಬಿಜೆಪಿಯು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿತ್ತು. ಕೇಂದ್ರ ಸರ್ಕಾರದ ತೆರಿಗೆ ನಿಯಮ, ತಪ್ಪು ಆರ್ಥಿಕ ನಿರ್ಧಾರದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನಮ್ಮ ಗ್ಯಾರಂಟಿಗಳು ನೆರವಾದವು. ಬಡವರಿಗೆ ನೀಡುವ ದುಡ್ಡು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇದರಿಂದ ಆರ್ಥಿಕತೆ ಚುರುಕುಗೊಳ್ಳಲಿದೆ ಎಂದರು.

ಕಾರವಾರ ಶಾಸಕರಾದ ಸತೀಶ ಸೈಲ್, ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಮುಖಂಡರಾದ ಸುಜಾತ ಗಾಂವಕರ್, ರಮಾನಂದ ನಾತಕ , ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಸಚಿವರ ಜೊತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next