Advertisement

ಜನಪ್ರತಿನಿಧಿಗಳ ಪ್ರಶ್ನಿಸುವ ಹಕ್ಕು ಮತದಾರರಿಗಿದೆ’

04:35 AM Jan 26, 2019 | |

ಬೆಂಗಳೂರು: ನಾವು ಆಯ್ಕೆ ಮಾಡಿದ ಜನಪ್ರತಿನಿಧಿ ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಅವರನ್ನು ಪ್ರಶ್ನಿಸುವುದು ಸಹ ಮತದಾರರ ಹಕ್ಕಾಗಿದೆ ಎಂದು ರಾಜ್ಯಪಾಲ ವಿ.ಆರ್‌.ವಾಲಾ ತಿಳಿಸಿದರು.

Advertisement

ರಾಜ್ಯ ಚುನಾವಣಾ ಆಯೋಗದ ವತಿಯಿಂದ ಶುಕ್ರವಾರ ನಗರದ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಮತದಾರರ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾನದ ವೇಳೆ ಜನರು ರಾಷ್ಟ್ರ ವಿಕಾಸಕ್ಕಾಗಿ ಶ್ರಮಿಸುವವರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ಆ ಮೂಲಕ ಸದೃಢ ದೇಶ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದರು.

ಸ್ವಾತಂತ್ರ್ಯ ನಂತರದಲ್ಲಿ ನಮ್ಮ ಪ್ರತಿನಿಧಿ ಯಾರಾಗಬೇಕೆಂಬುದನ್ನು ನಿರ್ಧರಿಸಲು ಚುನಾವಣಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲಿಂದ ಜನರು ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ, ಮತದಾರರು ಚುನಾ ವಣೆ ವೇಳೆ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಒಂದೊಮ್ಮೆ ಅವರು ಕೆಲಸ ಮಾಡದಿದ್ದರೆ ಅವರನ್ನು ಪ್ರಶ್ನಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ಅಜಯ್‌ ನಾಗಭೂಷಣ್‌ ಮಾತನಾಡಿ, ಪ್ರಸಕ್ತ ಸಾಲಿನ ಚುನಾವಣಾ ಜಾಗೃತಿ ಅಭಿಯಾನವನ್ನು ‘ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂಬ ಘೋಷವಾಕ್ಯದೊಂದಿಗೆ ನಡೆಸಲಾಗುತ್ತಿದೆ. ಜ.16ರಂದು ಪ್ರಕಟಿಸಿದ ರಾಜ್ಯ ಮತದಾರರ ಪಟ್ಟಿಯಲ್ಲಿ 5.3 ಕೋಟಿ ಮತದಾರರಿದ್ದು, ಇನ್ನೂ ಪಟ್ಟಿಗೆ ಸೇರಲು ಅವಕಾಶವಿದೆ ಎಂದು ಹೇಳಿದರು.

ಯಾರೊಬ್ಬರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಕಾರಣಕ್ಕಾಗಿ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಮನೆಗಳಿಗೆ ಎರೆಡೆರಡು ಬಾರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಜತೆಗೆ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

Advertisement

ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರಿದವರು, ಅಂಧ ಮತದಾರರು, ಬುಡಕಟ್ಟು ಜನಾಂಗದ ಮತದಾರರಿಗೆ ಸಾಂಕೇತಿಕವಾಗಿ ಮತದಾ ರರ ಗುರುತಿನ ಚೀಟಿ ನೀಡಲಾಯಿತು. ಜತೆಗೆ 2018ರ ವಿಧಾಸನಭಾ ಚುನಾವಣೆ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ 15 ಅಧಿಕಾರಿಗಳನ್ನು, ರಾಜ್ಯಮಟ್ಟದ ಚುನಾವಣಾ ಕ್ವಿಜ್‌ನಲ್ಲಿ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ನಗರ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next