ರಾಂಪುರ: ಮತದಾರರೇ ನನ್ನ ಮಾಲೀಕರು. ನಾನು ಜನರ ಸೇವೆ ಮಾಡುವ ಕೂಲಿ ಕಾರ್ಮಿಕಳು ಎಂದು ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಹೇಳಿದರು. ಬೇವೂರ ಗ್ರಾಮ ಸೇರಿದಂತೆ ಹಳ್ಳೂರ, ಚವಡಾಪುರ, ಸಂಗಾಪುರ, ಬೋಡನಾಯಕದಿನ್ನಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿಗೆ ಮೋದಿ ಅವರ ಹೆಸರು ಬಂಡವಾಳವಾಗಿದೆ. ಕ್ಷೇತ್ರಕ್ಕೆ ಅವರ ಸಾಧನೆ ಶೂನ್ಯವಾಗಿದೆ. ತಮ್ಮನ್ನು ನೋಡಿ ಯಾರೂ ಮತ ಹಾಕುವುದಿಲ್ಲ ಎಂದು ತಿಳಿದು, ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚಕಾರ ಎತ್ತದೆ ಕೇವಲ ಮೋದಿ ಜಪ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಬೇಕು.
ಕ್ರಿಯಾಶೀಲರಾಗಿರುವ ವೀಣಾ ಕಾಶಪ್ಪನವರ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ದೇಶದಲ್ಲಿ ಇದುವರೆಗೆ ಯಾವ ಪಕ್ಷದವರೂ ದೇಶದ ಹೆಮ್ಮೆ ಆಗಿರುವ ಯೋಧರನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಆದರೆ ಮೋದಿ ಅವರು ಅದನ್ನು ಮಾಡಿ ಕೀಳು ರಾಜಕೀಯ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಸಿದ್ದಪ್ಪ ಗಡೇದ, ಹುಚ್ಚಪ್ಪ ಗೌಡರ, ವೀರೇಶ ಗಡೇದ ಮುಂತಾದವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಎಚ್.ವೈ. ಮೇಟಿ, ಪ್ರಮುಖರಾದ ಬಸವರಾಜ ಮೇಟಿ, ಜಿ.ಜಿ. ಮಾಗನೂರ, ಎಸ್.ವೈ. ಶಿರೂರ, ಮುರೆಗೆಪ್ಪ ವೈಜಾಪುರ, ಆರ್.ಎಸ್. ವೈಜಾಪುರ ಮುಂತಾದವರು ಉಪಸ್ಥಿತರಿದ್ದರು.