Advertisement

ಜಾತಿ ಲೆಕ್ಕಾಚಾರಕ್ಕೆ ಜೈ ಅಂದ ಮತದಾರ

04:25 PM Dec 06, 2019 | Suhan S |

ಮೈಸೂರು: ನಮ್ಮೂರಲ್ಲಿ ಹಂಗೇನಿಲ್ಲ..ಹಸ್ತ, ಕಮಲ, ತೆನೆ ಹೊತ್ತ ಮಹಿಳೆ ಮೂರು ಇದ್ಯಲ್ಲಾಎಂದು ಬಹಿರಂಗವಾಗಿ ಹೇಳುತ್ತಾ, ಅಂತರಂಗದಲ್ಲಿ ಬೇರೆಯದೇ ಲೆಕ್ಕಾಚಾರಗಳನ್ನು ಹಾಕಿದ್ದ ಮತದಾರ ಕಡೆಯವರೆಗೂ ಗುಟ್ಟುಬಿಟ್ಟು ಕೊಡದೆ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ತಲೆ ನೋವು ತಂದಿಟ್ಟಿದ್ದ.

Advertisement

ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಹುಣಸೂರು ನಗರ ಸೇರಿದಂತೆ ಕ್ಷೇತ್ರದ 25ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭೇಟಿ ನೀಡಿದ್ದ ವೇಳೆ ಜಾಣ ಮತದಾರ ತನ್ನ ಮತದಾನದ ರಹಸ್ಯ ಬಿಟ್ಟುಕೊಡದೆ ರಾಜಕೀಯ ಕಾರ್ಯಕರ್ತರನ್ನು ಹೈರಾಣಾಗಿಸಿದ್ದು ಕಂಡು ಬಂತು.

ಮತಗಟ್ಟೆಗಳ ಬಳಿ ಮತದಾರರ ಸಹಾಯಕ್ಕಾಗಿ ಅಭ್ಯರ್ಥಿಗಳ ಕಡೆಯಿಂದ ಸ್ಥಾಪಿಸಿದ್ದ ಬೂತ್‌ಗಳಲ್ಲಿ ಸಿದ್ಧರಾಗಿ ನಿಂತಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಬೆಳಗ್ಗೆಯೇ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಅಭ್ಯರ್ಥಿಗಳ ಪರ ಮತಹಾಕಿಸಿ ಬಿಡಬೇಕೆಂಬ ಧಾವಂತ. ಆದರೆ, ಮಾಗಿ ಚಳಿಯಿಂದಾಗಿ ಬೆಚ್ಚಗೆ ಮಲಗಿದ್ದ ಮತದಾರ, ಮತದಾನ ಆರಂಭವಾದರೂ ಮತಗಟ್ಟೆಯತ್ತ ಸುಳಿಯದ ಕಾರಣ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಸುತ್ತಮುತ್ತಲಿನ ಬಡಾವಣೆಗಳ ಜನರ ಮನೆ ಬಾಗಿಲಿಗೆ ಹೋಗಿ ಕೈಮುಗಿದು ಮತಗಟ್ಟೆಗೆ ಕರೆತರಲು ಹರಸಾಹಸ ಪಡುತ್ತಿದ್ದರು.

ಹೀಗೆ ಮತಗಟ್ಟೆ ಬಳಿಗೆ ಬಂದ ಮತದಾರರನ್ನು ಆಕರ್ಷಿಸಲು ಮೂರು ಪಕ್ಷಗಳ ಬೂತ್‌ ಕಾರ್ಯಕರ್ತರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದರಾದರೂ ಅದಾಗಲೇ ಯಾರಿಗೆ ತನ್ನ ಮತ ಎಂದು ನಿರ್ಧರಿಸಿದ್ದ ಮತದಾರರು ಮುಗುಳ್ನಕ್ಕು ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಬಂದವರಿಗೆ ಕಾರ್ಯಕರ್ತರು ಜಿದ್ದಿಗೆ ಬಿದ್ದು ಕೈಮುಗಿಯುತ್ತಾ ಹಲ್ಕಿರಿಯುತ್ತಿದ್ದರು. ಹಳ್ಳಿಗಳಲ್ಲಿ ವಯಸ್ಸಾದವರು ಒಂದಷ್ಟು ಜನ ಗುಂಪುಗೂಡಿ ಮಾಗಿ ಚಳಿಗೆ ಕೊಟ್ಟಿಗೆಯಲ್ಲಿ ಬೆಂಕಿ ಹಾಕಿಕೊಂಡು ಮೈಬೆಚ್ಚಗೆ ಮಾಡಿಕೊಳ್ಳುತ್ತಾ ರಾಜಕೀಯ ಚರ್ಚೆಯಲ್ಲಿ ತೊಡಗಿದ್ದರೆ, ಇನ್ನೊಂದಷ್ಟು ಜನ ಹಳ್ಳಿಗಳಲ್ಲಿನ ಗೂಡಂಗಡಿ, ಟೀಶಾಪ್‌ಗ್ಳ ಮೊರೆ ಹೋಗಿದ್ದರು. ಮಧ್ಯವಯಸ್ಕರಲ್ಲಿ ಪರಮಾತ್ಮನನ್ನು ಏರಿಸಿದ್ದ ಹೆಚ್ಚಿನವರು ಚಳಿಯನ್ನೂ ಲೆಕ್ಕಿಸದೆ ತಮ್ಮ ಪಕ್ಷಗಳ ಶಾಲು ಹೊದ್ದು, ಕರಪತ್ರ ಹಿಡಿದು ಮತಗಟ್ಟೆಗೆ ಬರುವ ಮತದಾರರ ಮನಗೆಲ್ಲಲು ದುಂಬಾಲು ಬೀಳುತ್ತಿದ್ದರು. ಹೀಗಾಗಿ ಹಳ್ಳಿಗಾಡಿನ ಗೂಡಂಗಡಿಗಳು, ಟೀಶಾಪ್‌ಗ್ಳಿಗೆ ಭರ್ಜರಿ ವ್ಯಾಪಾರವಾಯಿತು.

ನಮ್ಮೂರಲ್ಲಿ ಇಂತವ್ರಿಗೇ ಓಟು: ನಮ್ಮ ಯಾರಿಗೆ ಎಂಬ ರಹಸ್ಯ ಬಿಟ್ಟುಕೊಡಲು ಹಿಂಜರಿಯುತ್ತಿದ್ದ ಮತದಾರರು, ಜಾತಿ ಲೆಕ್ಕಾಚಾರದ ಮೇಲೆ ನಮ್ಮೂರಲ್ಲಿ ಇಂತವ್ರಿಗೆ ಹೆಚ್ಚು ಓಟು ಹೋಗಿದೆ, ಇಂತವ್ರಿಗೆ ಇಲ್ಲ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿಗೊಳಿಸುವ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ 891 ಮತದಾರರಿದ್ದರೂ ಯಾವುದೇ ರಾಜಕೀಯ ಪಕ್ಷಗಳವರೂ ಅತ್ತ ಸುಳಿದಿರಲಿಲ್ಲ. ಆದರೂ ಗಿರಿಜನರು ಮತದಾನ ಮಾಡಲು ಉತ್ಸಾಹ ತೋರುತ್ತಿದ್ದರಾದರೂ ಅನಕ್ಷರಸ್ಥರಾದ ಅವರಿಗೆ ಮತದಾರರ ಚೀಟಿ, ಗುರುತಿನ ಚೀಟಿ ಹೊಂದಿಸಿಕೊಡಲು ನೆರವಾಗುವವರ ಕೊರತೆ ಎದ್ದು ಕಾಣುತ್ತಿತ್ತು. ಇನ್ನು ಕಾಡಂಚಿನ ದೊಡ್ಡ ಹೆಜೂರು, ಕೊಳವಿಗೆ, ನೇಗತ್ತೂರು, ಮುದಗನೂರು ಸೇರಿದಂತೆ ಹೋಬಳಿ ಕೇಂದ್ರವಾದ ಹನಗೋಡಿನಲ್ಲಿ ಕಾಂಗ್ರೆಸ್‌ಬಿಜೆಪಿ ನಡುವೆ ನೇರಾ ನೇರ ಪೈಪೋಟಿ ಕಂಡುಬಂತು.

Advertisement

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸ್ವಗ್ರಾಮ ಕಲ್ಲಹಳ್ಳಿಯಲ್ಲಿ ಗ್ರಾಮದಲ್ಲಿ ಇಂತದ್ದೇ ಜನಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಅಭ್ಯರ್ಥಿ ಗೌಣ, ಇಂಥವರ ಮುಖ ನೋಡಿ ಮತ ಹಾಕುತ್ತಿದ್ದೇವೆ ಎಂದು ಬಹುತೇಕ ಮಂದಿ ಸೂಚ್ಯವಾಗಿ ಗುಟ್ಟು ಬಿಟ್ಟುಕೊಟ್ಟರು. ಒಟ್ಟಾರೆ ಉಪ ಚುನಾವಣೆಯಲ್ಲಿ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರಗಳು ಗೌಣವಾಗಿ, ಜಾತಿ ಲೆಕ್ಕಾಚಾರಗಳು, ಹಣ, ಮತ್ತಿತರೆ ಆಮಿಷಗಳು ಮತದಾರರ ಮೇಲೆ ಪ್ರಭಾವ ಬೀರಿದ್ದು ಕಂಡು ಬಂತು.

 

-ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next