Advertisement

ಉತ್ತರದಲ್ಲಿ ಮತದಾರರ ಒಲವು ಎತ್ತ?

12:11 PM May 01, 2019 | Team Udayavani |

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಪೈಪೋಟಿಗೆ ಕಾರಣವಾಗಿದ್ದ ಉತ್ತರ ಮತಕ್ಷೇತ್ರದಲ್ಲಿ ಲೋಕಸಭೆಗೂ ಏಟು-ಏದಿರೇಟು ಜೋರಾಗಿ ಶುರುವಾಗಿದೆ. ತಮ್ಮ ಅಭ್ಯರ್ಥಿಗೆ ಎಷ್ಟೆಷ್ಟು ಮತಗಳು ಹೋಗಿರಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯರ್ತರು ಮುಳುಗಿದ್ದಾರೆ. ಬಿಜೆಪಿ ಹೆಚ್ಚಿನ ಮುನ್ನಡೆ ಸಾಧಿಸುವ ಉಮೇದು ಕಾರ್ಯಕರ್ತರಲ್ಲಿದೆ.

Advertisement

ಮಾಜಿ ಹಾಗೂ ಹಾಲಿ ಶಾಸಕರ ಪರಸ್ಪರ ಪ್ರತಿಷ್ಠೆಗೆ ಉತ್ತರ ಮತಕ್ಷೇತ್ರ ಉತ್ತರ ಕೊಡಲಿದೆಯೇ ಎಂದು ಎರಡೂ ಪಕ್ಷಗಳ ಕಾರ್ಯಕರ್ತರು ಭಾಗಾಕಾರ, ಗುಣಾಕಾರ ಲೆಕ್ಕ ಮಾಡುತ್ತಿದ್ದಾರೆ. ಬಹುಭಾಗ ನಗರ ಪ್ರದೇಶದ ವ್ಯಾಪ್ತಿ ಹೊಂದಿರುವ ಕ್ಷೇತ್ರದಲ್ಲಿ ಮತದಾನಕ್ಕಿಂತ ಮುಂಚೆಯಿಂದಲೂ ಲೆಕ್ಕ ಹಾಕುವುದರಲ್ಲಿಯೇ ಜನ ಮಗ್ನರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಈ ಭಾಗಕ್ಕೆ ಚಿರಪರಿಚಿತ ಹೆಸರು. ಆದರೆ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಸಾಧುನವರ ಅಪರಿಚಿತರು. ಎರಡೂ ಪಕ್ಷಗಳ ಸಾಂಪ್ರದಾಯಿಕ ಮತಗಳ ಬಗ್ಗೆ ಲೆಕ್ಕ ಹಾಕುತ್ತ ಕುಳಿತಿರುವ ಅಭ್ಯರ್ಥಿಗಳು, ಇನ್ನುಳಿದ ಮತಗಳು ನಮ್ಮ ಪರ ವಾಲಿರಬಹುದು ಎಂದು ಅಂದಾಜಿಸಿದ್ದಾರೆ.

ಉತ್ತರ ಕ್ಷೇತ್ರದಲ್ಲಿ ಒಟ್ಟು 2,34,484 ಮತಗಳಿದ್ದು, ಈ ಸಲ ಶೇ. 61.68ರಷ್ಟು ಮತದಾನವಾಗಿದೆ. 74,466 ಪುರುಷರು ಹಾಗೂ 70,154 ಮಹಿಳೆಯರು ಹಾಗೂ ಎರಡು ಇತರೆ ಮತ ಸೇರಿ ಒಟ್ಟು 1,44,622 ಜನ ಹಕ್ಕು ಚಲಾಯಿಸಿದ್ದಾರೆ.ಫಿರೋಜ್ -ಬೆನಕೆ ಮಧ್ಯೆ ಹಣಾಹಣಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳಿದ್ದರು. ಬಿಜೆಪಿಯ ಅಂಗಡಿಗೆ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಟಾಳಕರ ತೀವ್ರ ಪೈಪೋಟಿ ನೀಡಿದ್ದರು. ಈ ಸಲ ಇಬ್ಬರು ಅಭ್ಯರ್ಥಿಗಳ ಮಧ್ಯೆ ತೀವ್ರ ಹಣಾಹಣಿ ಇರುವುದರಿಂದ 50:50 ಪ್ರಮಾಣದಲ್ಲಿ ಮತ ವಿಂಗಡಣೆ ಆಗಬಹುದೇ ಎಂಬ ಅನುಮಾನವೂ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಫಿರೋಜ ಸೇ ಪ್ರಚಾರ ವೇಳೆ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಿದ್ದಾರೆನ್ನಲಾದ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. ಇದುವೇ ಕಾಂಗ್ರೆಸ್‌ ಸೋಲಿಗೆ ಕಾರಣವೂ ಆಗಿತ್ತು. ಹ್ಯಾಟ್ರಿಕ್‌ ಗೆಲುವಿನ ಕನಸು ಕಂಡಿದ್ದ ಫಿರೋಜ್  ಬೆನಕೆ ಸೋಲಿನ ರುಚಿ ತೋರಿಸಿದ್ದಾರೆ.

ಮತದಾನಕ್ಕಿಂತ ಮೊದಲಿದ್ದ ಚುನಾವಣಾ ಕಾವು ಮತದಾನದ ನಂತರವೂ ಕಡಿಮೆ ಆಗಿಲ್ಲ. ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಅಂತೆ-ಕಂತೆಗಳ ಲೆಕ್ಕಾಚಾರವೇ ನಗರದೆಲ್ಲೆಡೆ ಶುರುವಾಗಿದೆ. ಸಂಸದ ಸುರೇಶ ಅಂಗಡಿ ವಿರೋಧಿ ಅಲೆ ಉತ್ತರ ಕ್ಷೇತ್ರದಲ್ಲಿಯೂ ಇದೆ. ಆದರೆ ಅಂಗಡಿ ಬಗೆಗಿನ ಅಸಮಾಧಾನದಿಂದ ಮತ ವಿಭಜನೆ ಆಗುವುದು ಅನುಮಾನ. ಮೋದಿ ಅಲೆ ಇಲ್ಲಿಯೂ ಬೀಸಿದ್ದು, ಅಷ್ಟೊಂದು ಸುಲಭವಾಗಿ ಬಿಜೆಪಿ ಮತಗಳಿಕೆ ಪ್ರಮಾಣ ಕಡಿಮೆ ಆಗುವುದಿಲ್ಲ.

Advertisement

ಹಿಂದುತ್ವ ಅಜೆಂಡಾ ಶಕ್ತಿಶಾಲಿ: ಬಿಜೆಪಿ ಶಾಸಕ ಅನಿಲ ಬೆನಕೆ ಬಿಜೆಪಿ ಮತಗಳನ್ನು ಒಟ್ಟುಗೂಡಿಸಿಕೊಂಡಿದ್ದಾರೆ. ಹಿಂದುತ್ವ ಅಜೆಂಡಾ ಮೇಲೆಯೇ ಬಿಜೆಪಿಗೆ ಮತ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಲಿಂಗಾಯತ ಹಾಗೂ ಮರಾಠಾ ಸಮುದಾಯದ ಮತದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡಿರುವ ಬೆನಕೆ, ಅಂಗಡಿಗೆ ಹೆಚ್ಚಿನ ಮತಗಳ ಅಂತರ ಕೊಡಿಸಲು ಶ್ರಮಿಸಿದ್ದಾರೆ. ಕ್ಷೇತ್ರದ ಮಹಾಂತೇಶ ನಗರ, ರಾಮತೀರ್ಥ ನಗರ, ಆಂಜನೇಯ ನಗರ, ಮಾಳಮಾರುತಿ ಪ್ರದೇಶಗಳಲ್ಲಿ ಹೆಚ್ಚಿನ ಮತದಾನವಾಗಿದ್ದು, ರಾಷ್ಟ್ರೀಯ ಸುರಕ್ಷತೆ ಹಾಗೂ ಮೋದಿ ಆಡಳಿತ ಮೆಚ್ಚಿ ಜನರು ಬಿಜೆಪಿಯತ್ತ ಹೆಚ್ಚಿನ ಒಲವು ತೋರಿಸಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಅಭಿಮತ.

ಮುಸ್ಲಿಂ ಮತಗಳೇ ಕೈಗೆ ಪ್ಲಸ್‌: ಸಾಧುನವರ ಹಾಗೂ ಅಂಗಡಿ ಒಂದೇ ಸಮುದಾಯಕ್ಕೆ ಸೇರಿದ್ದರಿಂದ ಲಿಂಗಾಯತ ಮತದಾರರು ಯಾರ ಕಡೆಗೆ ವಾಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಮುಸ್ಲಿಂ ಸಮುದಾಯದ ಮತಗಳೂ ಹೆಚ್ಚಿನ ಪ್ರಮಾಣದಲ್ಲಿದ್ದು, ಕಾಂಗ್ರೆಸ್‌ಗೆ ಇದು ಪ್ಲಸ್‌ ಪಾಯಿಂಟ್. ಮಾಜಿ ಶಾಸಕ ಫಿರೋಜ್ ಶಾ ಮುಸ್ಲಿಂ ಸಮುದಾಯದ ಮತಗಳ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದರು. ಮತ ಒಡೆದು ಹೋಗದಂತೆ ಎಚ್ಚರಿಕೆ ವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಸಿಗುವಂತೆ ಕಸರತ್ತು ನಡೆಸಿದ್ದರು.

ಒಂದೆಡೆ ಮೋದಿ ಅಲೆ, ಇನ್ನೊಂದೆಡೆ ಹಿಂದುತ್ವ ಅಜೆಂಡಾ ಮತಗಳು ಬಿಜೆಪಿಗೆ ವರದಾನವಾಗಲಿವೆ. ಕಳೆದ ಸಲಕ್ಕಿಂತಲೂ ಈ ಬಾರಿ ಅಂಗಡಿಗೆ ಮತಗಳ ಮುನ್ನಡೆ ಸಿಗಲು ಬೆನಕೆ ರಣತಂತ್ರ ಹೆಣೆದಿದ್ದು, ಮರಾಠಾ ಹಾಗೂ ಲಿಂಗಾಯತ ಮತಗಳು ವಿಭಜನೆ ಆಗದಂತೆ ನೋಡಿಕೊಂಡಿದ್ದಾರೆ.

 

ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಚಾರಕ್ಕೆ ಬರಲೇ ಇಲ್ಲ. ಕೊನೆಯ ಕ್ಷಣದಲ್ಲಿ ಅವರಿಗೆ ಸೋಲಿನ ಭಯ ಕಾಡಿದೆ. ನಮ್ಮಲ್ಲಿ ಈ ಸಲ 30 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆ ಬಿಜೆಪಿ ಆಗುವುದು ನಿಶ್ಚಿತ. ಬೂತ್‌ ಮಟ್ಟದಲ್ಲಿ ನಮ್ಮ ಸಂಘಟನೆ ಇರುವುದರಿಂದ ಜನರು ಮೋದಿ ಫ್ಯಾಕ್ಟರ್‌ ಹಾಗೂ ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಮತದಾನ ಮಾಡಿದ್ದಾರೆ. –ಅನಿಲ ಬೆನಕೆ, ಶಾಸಕರು ಉತ್ತರ ಕ್ಷೇತ್ರ

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next