ಬಂಗಾರಪೇಟೆ: ಜ.1, 2020ಕ್ಕೆ 18 ವರ್ಷ ಪೂರ್ಣಗೊಂಡವರಿಗೆ ಮತದಾನ ಹಕ್ಕು ನೀಡಲು ಆಯೋಗ ಅವಕಾಶ ನೀಡಿದೆ. ತಪ್ಪದೇ ಹೆಸರು ನೋಂದಾಯಿಸಿಕೊಳ್ಳುವಂತೆ ತಾಪಂ ಇಒ ಎನ್.ವೆಂಕಟೇಶಪ್ಪ ಸಲಹೆ ನೀಡಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಜಿಪಂ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಮಿಂಚಿನ ನೋಂದಣಿ ಮತ್ತು ಅಬ್ಬರದ ಪ್ರಚಾರ ಜಾಥಾಗೆ ಚಾಲನೆ ನೀಡಿ ಮಾತ ನಾಡಿದ ಅವರು, ಜ.6, 7 ಮತ್ತು 8 ರಂದು ಮಿಂಚಿನ ನೋಂದಣಿ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲಾ ಯುವ ಸಮುದಾಯ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ದೇಶದ ಭವಿಷ್ಯ ಯುವಜನರ ಕೈಯಲ್ಲಿ: ಮತದಾನ ನಮ್ಮ ಹಕ್ಕು ಎಂಬ ಭಾವನೆ ಎಲ್ಲರಲ್ಲೂ ಬರ ಬೇಕಾಗಿದೆ. ನಾವು ಹಾಕುವ ಮತ, ನಮ್ಮ ದೇಶದ ಭವಿಷ್ಯ ನಿರ್ಧರಿಸುತ್ತದೆಂದೂ ಹೇಳಿದ ಅವರು, ನಾಗರಿಕರಲ್ಲಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಿಸುವ ಜವಾಬ್ದಾರಿ ಯುವಜನರ ಮೇಲಿದೆ ಎದು ಅಭಿಪ್ರಾಯಪಟ್ಟರು.
ದೇಶದ ಭವಿಷ್ಯ ಉಜ್ವಲ: ದೇಶದ ಪ್ರತಿಯೊಬ್ಬರೂ ಮತದಾನ ಮಾಡುವಂತಾಗಬೇಕು. ನಮ್ಮಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಮತದಾನ ಮಾಡಲು ಅಸಡ್ಡೆ ಮಾಡುತ್ತಾರೆ. ಪ್ರತಿಯೊಬ್ಬರೂ ಮತದಾನದ ಅವಶ್ಯಕತೆ ಅರಿತು, ಮತಚಲಾಯಿಸಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ಬೇಜವಾಬ್ದಾರಿ ಬೇಡ: ಇತ್ತೀಚೆಗೆ ಮತ ಚಲಾವಣೆ ಕಡಿಮೆಯಾಗುತ್ತಿದೆ. ತಮ್ಮ ಹಕ್ಕು ಚಲಾಯಿಸದೇ ನಿರ್ಲಕ್ಷ್ಯವಹಿಸುತ್ತಿರುವುದು ಸಹ ದೇಶದ ಅಭದ್ರತೆಗೆ ಶಕ್ತಿ ತುಂಬಿದಂತಾಗುತ್ತದೆ. ಎಲ್ಲರೂ ತಪ್ಪದೇ ಮತ ದಾನ ನೀಡಬೇಕು. ಕೆಲವು ಒಂದು ಮತದಿಂದ ಯಾರೂ ಗೆಲ್ಲುವುದಿಲ್ಲ ಹಾಗೂ ಸೋಲುವುದಿಲ್ಲ ಎಂಬ ಬೇಜವಾಬ್ದಾರಿ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ತಪ್ಪದೇ ತಮಗೆ ಇಷ್ಟವಾದ ಅಭ್ಯರ್ಥಿಗೆ ಮತ ಹಾಕಬೇಕು ಎಂದರು. ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್, ವ್ಯವಸ್ಥಾಪಕ ಮುನಿಶಾಮಿರೆಡ್ಡಿ, ಮಾವಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಶ್ವತ್ಥ್ ನಾರಾಯಣಗೌಡ, ನೈಸ್ ಶಾಲೆಯ ರಘು, ಲೋಕಶಿಕ್ಷಣ ಇಲಾಖೆಯ ಅಧಿಕಾರಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.