ಯಾದಗಿರಿ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳದೆ ಇರುವವರು ಏ. 14ರೊಳಗೆ ನೋಂದಾಯಿಸಿಕೊಳ್ಳಬೇಕೆಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ರವಿವಾರ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಯಾದಗಿರಿ ನಗರದ ಅಂಬೇಡ್ಕರ್ ನಗರ ಮತ್ತು ಸರ್ಕಾರಿ ಜೂನಿಯರ್ ಕಾಲೇಜುಗಳ ಮತಗಟ್ಟೆಗಳಿಗೆ ತೆರಳಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಭಾವಚಿತ್ರ ನೀಡದೆ ಇರುವವರು ತಮ್ಮ ಭಾವಚಿತ್ರಗಳನ್ನು ನೀಡಬೇಕೆಂದು ತಿಳಿಸಿದ ಅವರು, ಮರಣ ಹೊಂದಿದವರ ಹೆಸರುಗಳಿದ್ದಲ್ಲಿ, ಪಟ್ಟಿಯಿಂದ ತೆಗೆದು ಹಾಕುವಂತೆ ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಿದರು.
ಮತಗಟ್ಟೆ ಪರಿಶೀಲನೆ: ಡಾ| ಬಿ.ಆರ್. ಅಂಬೇಡ್ಕರ್ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರು ಮತಗಟ್ಟೆಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ ಕೊಠಡಿಗಳನ್ನು ಪರಿಶೀಲಿಸಿದರು.
ಸರಿಯಾದ ಗಾಳಿ-ಬೆಳಕು, ನೀರಿನ ವ್ಯವಸ್ಥೆ, ಶೌಚಾಲಯ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಡಾ| ಅವಿನಾಶ್ ಮೆನನ್ ರಾಜೇಂದ್ರನ್, ಇವಿಎಂ ಮತ್ತು ವಿವಿ ಪ್ಯಾಟ್ ನೋಡಲ್ ಅಧಿಕಾರಿ ಹಾಗೂ ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ತಹಶೀಲ್ದಾರ್ ಮಲ್ಲೇಶ್ ತಂಗಾ ಮುಂತಾದವರು ಇದ್ದರು.