ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾರರ ಪಟ್ಟಿಯ ಗುದುಮುರಿಗೆ ಶುರುವಾಗಿದೆ. ಸಂಘದ ಚುಕ್ಕಾಣಿ ಹಿಡಿಯಲು ಒಂದು ಬಣ ಖೊಟ್ಟಿ ಮತದಾರರ ಪಟ್ಟಿ ಸಿದ್ಧಪಡಿಸಿದೆ ಎನ್ನುವ ಆರೋಪಗಳು ಬಲವಾಗಿ ಕೇಳಿಬರುತ್ತಿದ್ದು, ಈ ಕುರಿತು ಸಂಘದ ಆಡಳಿತ ಮಂಡಳಿ ಸದಸ್ಯರೇ ಸಹಕಾರಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಸಾರಿಗೆ ನೌಕರರ ಪತ್ತಿನ ಸಂಘದ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು; ಕೊಪ್ಪಳ, ಗದಗ, ಹಾವೇರಿ ಹಾಗೂ ಧಾರವಾಡ ನಾಲ್ಕು ಜಿಲ್ಲೆಯ ಆರು ವಿಭಾಗ ವ್ಯಾಪ್ತಿಯ 4922 ನೌಕರರು ಸದಸ್ಯರಿದ್ದು, 224 ಸದಸ್ಯರು ಕಟುಬಾಕಿದಾರರಾಗಿದ್ದಾರೆ. 2302 ಸದಸ್ಯರು ಮತದಾನ ಹಕ್ಕು ಪಡೆದಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ತಯಾರಿಸಿರುವ ಮತದಾರರ ಪಟ್ಟಿ ಖೊಟ್ಟಿ ಎನ್ನುವ ಆರೋಪಗಳು ಬಲವಾಗಿ ಕೇಳಿಬರುತ್ತಿದೆ. ಚುನಾವಣೆಗಾಗಿಯೇ ಒಂದು ಬಣ ಖೊಟ್ಟಿ ಮತದಾರರ ಪಟ್ಟಿ ಸಿದ್ಧಪಡಿಸಿದೆ. ಆದರೆ ಚುನಾವಣೆ ದಿನಾಂಕ ನಿಗದಿಯಾದರೂ ಮತದಾರರ ಪಟ್ಟಿ ಪ್ರಕಟಿಸಿಲ್ಲ ಎನ್ನುವ ಆರೋಪ ದಟ್ಟವಾಗಿದೆ.
ಮತದಾರರ ಪಟ್ಟಿ ನಿಜವೇ?: ಐದು ಸಾಮಾನ್ಯ ಸಭೆಗಳಲ್ಲಿ ಕನಿಷ್ಠ ಮೂರರಲ್ಲಿ ಪಾಲ್ಗೊಂಡವರು ಮಾತ್ರ ಮತದಾನ ಮಾಡಲು ಅರ್ಹತೆ ಪಡೆಯುತ್ತಾರೆ ಎನ್ನುವ ಸಹಕಾರಿ ಇಲಾಖೆ ನಿಯಮದ ಪ್ರಕಾರ ಪಟ್ಟಿಸಿದ್ಧಪಡಿಸಲಾಗಿದೆ. 4922 ಮತದಾರರ ಪೈಕಿ ಕೇವಲ2302 ಮತದಾರರು ಮಾತ್ರ ಅರ್ಹತೆ ಪಡೆದಿದ್ದಾರೆ. ಈ ಪಟ್ಟಿಯೇ ಖೊಟ್ಟಿ ಎಂದು ದೂರುಗಳು ಸಲ್ಲಿಕೆಯಾಗಿವೆ.ಐದು ವರ್ಷದಲ್ಲಿ ನಡೆದ ಐದು ಸಾಮಾನ್ಯ ಸಭೆಗೆ ಒಂದೇ ಮಾದರಿಯ ದಾಖಲೆ ನಿರ್ವಹಣೆ, ಒಂದೇ ಪೆನ್ನು ಬಳಸಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯರು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ದೂರಿನಲ್ಲಿ ಏನಿದೆ?: ಆಡಳಿತ ಮಂಡಳಿಯ ಕೆಲ ಸದಸ್ಯರು ದೂರು ಸಲ್ಲಿಸಿದ್ದು, ಸಂಘದ ಕಾರ್ಯದರ್ಶಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆ ದಿನಾಂಕ ಪ್ರಕಟವಾಗುವ ಮುಂಚೆ ಅರ್ಹತಾ ಕರಡು, ಕರ್ತವ್ಯ ಲೋಪವೆಸಗಿದವರಪಟ್ಟಿ, ಮರುಪಾವತಿ ಮಾಡದ ಸದಸ್ಯರ ಬಾಕಿ ಪಟ್ಟಿ ಪ್ರಕಟಿಸಬೇಕು. ಆದರೆ ಇದು ಇನ್ನೂ ಕಾರ್ಯಗತವಾಗಿಲ್ಲ. ಐದು ವರ್ಷದ ಸಾಮಾನ್ಯ ಸಭೆಗೆ ಹಾಜರಾದವರ ಪಟ್ಟಿ ಖೊಟ್ಟಿಯಾಗಿದೆ. ಈ ಕುರಿತು ಮತದಾರರ ಯಾದಿ ಪರಿಶೀಲನಾಧಿಕಾರಿ ಗಮನಕ್ಕೆ ತಂದಾಗ್ಯೂ ಸಹಕಾರ ಚುನಾವಣಾ ಅಯುಕ್ತರಿಗೆ ದೂರು ಸಲ್ಲಿಸುವಂತೆ ನಮ್ಮ ಮನವಿ ತಳ್ಳಿಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಸಭೆ ಕಷ್ಟ: ಉಳಿದ ಸಹಕಾರಿ ಪತ್ತಿನ ಸಂಘಗಳಂತೆ ಸಾರಿಗೆ ನೌಕರರ ಪತ್ತಿನ ಸಹಕಾರಿ ಸಂಘದ ಸಾಮಾನ್ಯ ಸಭೆಗಳಿಗೆ ಎಲ್ಲಾ ಸದಸ್ಯರು ಹಾಜರಾಗುವುದು ಅಸಾಧ್ಯವಾಗಿದೆ. ಈ ನೌಕರರು ತುರ್ತು ಸೇವೆಯಡಿ ಬರುವುದರಿಂದ ಏಕಕಾಲಕ್ಕೆ ಐದು ಸಾವಿರ ನೌಕರರು ರಜೆ ಹಾಕಿ ಸಾಮಾನ್ಯ ಸಭೆಗೆ ಹಾಜರಾಗಲು ಸಾಧ್ಯವಿಲ್ಲ. ಈನಿಯಮದ ಪ್ರಕಾರ 2302 ಸದಸ್ಯರು ಮಾತ್ರ ಅರ್ಹತೆಪಡೆದುಕೊಂಡಿದ್ದು, ಉಳಿದವರು ಮತದಾನದಿಂದ ವಂಚಿತರಾಗಿದ್ದಾರೆ. ಆಡಳಿತದಲ್ಲಿರುವ ಬಣ ಪುನಃ ಅಧಿಕಾರಕ್ಕೆ ಬರಲು ನಿಯಮಬಾಹಿರವಾಗಿ ಖೊಟ್ಟಿ ಮತದಾರರ ಯಾದಿ ತಯಾರಿಸಿದ್ದಾರೆ ಎನ್ನುವುದು ವಿರೋಧಿ ಬಣದ ಆರೋಪವಾಗಿದ್ದು, ಸಹಕಾರಿ ಇಲಾಖೆಯ ನಿಬಂಧಕರವರೆಗೂ ದೂರು ನೀಡಿದ್ದಾರೆ.
ಸಂಬಂಧಿಕರ ನೇಮಕಾತಿ! : ಇತ್ತೀಚೆಗಷ್ಟೆ ಸಂಘದಲ್ಲಿ ಖಾಲಿಯಿದ್ದ ಹುದ್ದೆಗಳಿಗೆ ಸಂಘದ ಪ್ರಮುಖರು ತಮ್ಮ ಸಂಬಂಧಿಗಳನ್ನು ನೇಮಕಾತಿ ಮಾಡುವ ಮೂಲಕ ಸಂಘದ ಬೈಲಾ ಉಲ್ಲಂಘಿಸಿದ ವಿದ್ಯಮಾನ ನಡೆದಿತ್ತು. ಇದು ಸದಸ್ಯರ ಆಕ್ರೋಶಕ್ಕೂ ಕಾರಣವಾಗಿತ್ತು. ಪ್ರಕರಣ ಹೊರಬರುತ್ತಿದ್ದಂತೆ ಪ್ರಮುಖ ಸ್ಥಾನದಲ್ಲಿದ್ದವರು ರಾಜೀನಾಮೆ ಸಲ್ಲಿಸಿದ್ದರು. ಎರಡು ಬಣಗಳ ನಡುವಿನ ಜಿದ್ದಾಜಿದ್ದಿಗೆ ಮತ್ತೂಂದು ಹೊಸ ಬಣ ಪ್ರಬಲ ಪೈಪೋಟಿ ನಡೆಸಲು ಸಿದ್ಧತೆ ನಡೆಸಿದೆ.
ಸಂಘದಿಂದ ತಯಾರಿಸಿರುವ ಮತದಾರರ ಪಟ್ಟಿ ಖೊಟ್ಟಿಯಾಗಿದೆ. ಅಂದು ಸಭೆಗೆ ಹಾಜರಾಗಿದ್ದಾರೆ ಎಂದು ಸಹಿ ಮಾಡಿದವರು ಕರ್ತವ್ಯದಲ್ಲಿರುವುದು ಖಚಿತವಾಗಿದೆ. ಚುನಾವಣೆ ಘೋಷಣೆಯಾಗಿದ್ದರೂ ನಮ್ಮ ಬಣದ ಸದಸ್ಯರಿಗೆ ಮತದಾರರ ಪಟ್ಟಿ ನೀಡುತ್ತಿಲ್ಲ.ಕೂಡಲೇ ಈ ಪಟ್ಟಿ ರದ್ದುಪಡಿಸಿ ಎಲ್ಲ ಅರ್ಹ ಸದಸ್ಯರಿಗೆ ಮತದಾನಕ್ಕೆ ಅವಕಾಶನೀಡಬೇಕು. ಆರ್.ಎಫ್. ಕವಳಿಕಾಯಿ, ಉಪಾಧ್ಯಕ್ಷ,ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ì ಫೆಡರೇಶನ್
ಸಹಕಾರಿ ಇಲಾಖೆ ನಿಯಮದ ಪ್ರಕಾರ ಐದರಲ್ಲಿ ಕನಿಷ್ಠ ಮೂರು ವಾರ್ಷಿಕ ಸಭೆಗಳಿಗೆ ಆಗಮಿಸದೆ ಸಹಕಾರಿ ಕಾರ್ಯಗಳಿಂದ ದೂರವಿದ್ದವರು ಮತದಾನದ ಹಕ್ಕನ್ನು ಕಳೆದುಕೊಂಡವರು ಹತಾಶೆಯಿಂದ ದೂರು ಸಲ್ಲಿಸುತ್ತಿದ್ದಾರೆ. ಸಂಘ ಮತದಾರರ ಪಟ್ಟಿಯನ್ನು ಕಳುಹಿಸುತ್ತದೆ. ಸಹಕಾರ ಇಲಾಖೆ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮ ಪಟ್ಟಿ ಹೊರಡಿಸುತ್ತಾರೆ. ಸಂಘದ ಮತದಾರರ ಯಾದಿ ಕಾನೂನಾತ್ಮಕವಾಗಿ ಮಾಡಲಾಗಿದೆ.
-ವೈ.ಎಸ್. ಹುಳ್ಳಿ, ಅಧ್ಯಕ್ಷ, ನೌಕರರ ಸಹಕಾರಿ ಪತ್ತಿನ ಸಂಘ