ಬೀದರ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ಕಾರ್ಯನಿಮಿತ್ತ ಚುನಾವಣೆ ಪಟ್ಟಿ ವೀಕ್ಷಕ ಮೊಹಮ್ಮದ್ ಮೊಹಸಿನ್ ಅವರು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದರು. ಸಾರ್ವಜನಿಕರೊಂದಿಗೆ ಸಲಹೆ, ಸೂಚನೆ ಮತ್ತು ಅಹವಾಲುಗಳನ್ನು ಸ್ವೀಕರಿಸುವ ವೇಳೆಯಲ್ಲಿ, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದೆಯಾ ಎಂದು ಪ್ರಶ್ನಿಸಿ ಅವರಿಂದ ಮಾಹಿತಿ ಪಡೆದರು.
ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಯಾವ ವಾರ್ಡ್‌ನಲ್ಲಿ, ಮಹಿಳೆಯರ ಅರ್ಜಿಗಳು ಎಷ್ಟು ಬಂದಿವೆ ಎಂಬುದನ್ನು ಗುರುತಿಸಿ, ಅವರ ನೋಂದಣಿಗೆ ಒತ್ತು ಕೊಡುವಂತೆ ಸೂಚಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಸಲಹೆ, ಸೂಚನೆ, ಮಾಹಿತಿ ಪಡೆಯುವ ನಿಟ್ಟಿನಲ್ಲಿ ಎಲ್ಲ ಕಡೆಗಳಲ್ಲಿ ಸಹಾಯ ಕೇಂದ್ರಗಳಿರುವಂತೆ ನೋಡಿಕೊಳ್ಳಲು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲು ಮತ್ತು ದೂರುಗಳ ದಾಖಲಾತಿಗೆ ಸಂಬಂಧಿಸಿದಂತೆ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾದ ಪ್ರತ್ಯೇಕ ಕೌಂಟರ್‌ಗೆ ಚುನಾವಣೆ ಪಟ್ಟಿ ವೀಕ್ಷಕರು ಭೇಟಿ ನೀಡಿದರು. ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಮತ್ತು ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಬಂದಿರುವ ಫಾರಂ ನಂ. 6, 7, 8 ಹಾಗೂ 8ಎ ಅರ್ಜಿಗಳನ್ನು ಕಾರ್ಯದರ್ಶಿಗಳು ಪರಿಶೀಲಿಸಿದರು. ದಾಖಲಾದ ದೂರುಗಳ ಬಗ್ಗೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಹಶೀಲ್ದಾರರಾದ ಕೀರ್ತಿ ಚಾಲಕ ಅವರು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿ ಡಾ| ಎಚ್.ಆರ್. ಮಹಾದೇವ, ಜಿ.ಪಂ ಸಿಇಒ ಡಾ| ಆರ್. ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ| ಡಿ. ಷಣ್ಮುಖ, ಸಹಾಯಕ ಆಯುಕ್ತರಾದ ಶರಣಬಸಪ್ಪ ಕೋಟಪ್ಪಗೋಳ, ಶಿವಕುಮಾರ ಶೀಲವಂತ, ಚುನಾವಣಾ ತಹಶೀಲ್ದಾರ ಶಾಂತಲಾ ಚಂದನ, ತಹಶೀಲ್ದಾರರಾದ ಕೀರ್ತಿ ಚಾಲಕ ಹಾಗು ಇತರರು ಇದ್ದರು.