Advertisement

ಮತದಾರರ ಪಟ್ಟಿ ಪರಿಶೀಲನೆ : ಕೊನೆಯ ಸಾಲಿನಲ್ಲಿ ದಕ್ಷಿಣ ಕನ್ನಡ; ಮುಂಚೂಣಿಯಲ್ಲಿ ಉಡುಪಿ

09:54 AM Oct 26, 2019 | Hari Prasad |

ಮಂಗಳೂರು: ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಪ್ರಾರಂಭಗೊಂಡು ತಿಂಗಳಾಗುತ್ತಿದ್ದರೂ ಸುಶಿಕ್ಷಿತರ ಜಿಲ್ಲೆಯೆಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ನಿರೀಕ್ಷಿತ ಸ್ಪಂದನೆ ಲಭಿಸಿಲ್ಲ.

Advertisement

ರಾಜ್ಯದಲ್ಲಿ ಇದುವರೆಗೆ ಶೇ. 53ರಷ್ಟು ಮತದಾರರು ಪರಿಶೀಲನೆ/ತಿದ್ದುಪಡಿ ಮಾಡಿಕೊಂಡಿದ್ದರೂ ದ.ಕ. ಜಿಲ್ಲೆಯಲ್ಲಿ ಮಾತ್ರ ಪ್ರಗತಿ ನಿರಾಸಾದಾಯಕವಾಗಿದ್ದು, 26ನೇ ಸ್ಥಾನದಲ್ಲಿದೆ. ನೆರೆಯ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.

ಉಡುಪಿಯಲ್ಲಿ 10,06,684 ಮತದಾರರ ಪೈಕಿ 7,23,533 ಮಂದಿ (ಶೇ.72) ಮತ್ತು ದ.ಕ.ದ 17,22,608 ಮತದಾರರ ಪೈಕಿ 8,10,080 ಮಂದಿ (ಶೇ. 47) ಆನ್‌ಲೈನ್‌ನಲ್ಲಿ ಮತ್ತು ಖುದ್ದಾಗಿ ವಿವರ ಪರಿಶೀಲಿಸಿದ್ದಾರೆ. ಮಂಡ್ಯ ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದರೆ ಚಿತ್ರದುರ್ಗ 2ನೇ ಸ್ಥಾನದಲ್ಲಿದೆ. ಬೆಳಗಾವಿ ಕೊನೆಯ ಸ್ಥಾನದಲ್ಲಿದೆ (ಶೇ.30)

ಸ್ವಯಂ ಪರಿಶೀಲನೆಗೆ ಅವಕಾಶ
ಮತದಾರರ ಪಟ್ಟಿ ಪರಿಷ್ಕರಣೆಗೆ ಪ್ರತಿ ವರ್ಷ ಅವಕಾಶವಿರುತ್ತದೆ. ಆದರೆ ಈಗ ವಿಶೇಷ ರೀತಿ ಮತ್ತು ಸಮಗ್ರ ವಾಗಿ ನಡೆಯುತ್ತಿದೆ. ಬಿಎಲ್‌ಒಗಳು ಮಾತ್ರವಲ್ಲದೆ ಮತದಾರರು ಸ್ವಯಂ ಪರಿಶೀಲನೆ ನಡೆಸಲು ಅವಕಾಶ ಒದಗಿಸಲಾಗಿದೆ. ಮತದಾರರು ಮೊಬೈಲ್‌ನಲ್ಲಿ voter helpline ಆ್ಯಪ್‌ ಮೂಲಕ ಪರಿಶೀಲಿಸಬಹುದು.

ಸೇವಾಸಿಂಧು ಮತ್ತಿತರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ, ಮತಗಟ್ಟೆ ಅಧಿಕಾರಿಯ ಮೂಲಕ, ತಾಲೂಕು ಕಚೇರಿ, ಎಸಿ ಕಚೇರಿಗಳಲ್ಲಿ ಪರಿಶೀ ಲಿಸಬಹುದು. ಮತದಾರರ ಸಹಾಯವಾಣಿ 1950ಕ್ಕೆ ಕರೆ ಮಾಡಿಯೂ ವಿಚಾರಿಸಬಹುದು. ವೆಬ್‌ ಪೋರ್ಟಲ್‌ www.nvsp.in ನಲ್ಲಿಯೂ ಪರಿಶೀಲಿಸಬಹುದು.

Advertisement

ಆಧಾರ್‌ ಲಿಂಕ್‌ ಪ್ರಕ್ರಿಯೆ ಇದಲ್ಲ
ಇದು ಮತದಾರರ ಗುರುತುಚೀಟಿ ಯನ್ನು ಆಧಾರ್‌ಗೆ ಲಿಂಕ್‌ ಮಾಡುವ ಪ್ರಕ್ರಿಯೆ ಅಲ್ಲ. ಪಟ್ಟಿ ಪರಿಶೀಲನೆ/ ತಿದ್ದುಪಡಿ ಅಷ್ಟೆ. ಆಧಾರ್‌ ಇದ್ದರೆ ಅದರಲ್ಲಿ ಎಲ್ಲ ಮಾಹಿತಿ ದೊರೆಯುವುದರಿಂದ ಬಿಎಲ್‌ಒಗಳು ಹೆಚ್ಚಾಗಿ ಆಧಾರ್‌ಕಾರ್ಡ್‌ನ್ನು ಕೇಳುತ್ತಾರೆ. ಮತದಾರರ ಪಟ್ಟಿ ಅಥವಾ ಗುರುತಿನ ಚೀಟಿ ಪರಿಷ್ಕರಣೆ ಮಾಡಿಕೊಳ್ಳದಿದ್ದರೂ ಮತದಾನಕ್ಕೆ ಅವಕಾಶವಿರುತ್ತದೆ. ಆದರೆ ಲೋಪಗಳಿದ್ದರೆ ಗೊಂದಲವುಂಟಾಗಿ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರತೀ ವರ್ಷ ನಡೆಯುತ್ತಿತ್ತು. ಇದರಲ್ಲಿ ಕೆಲವು ಲೋಪಗಳನ್ನು ಮಾತ್ರ ಸರಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷವಾಗಿ ಸಮಗ್ರ ಪರಿಶೀಲನೆ ನಡೆಸಿ ಲೋಪದೋಷಗಳು ಇಲ್ಲದಂತೆ ಮಾಡುವ ಉದ್ದೇಶ ಇದೆ. ಇದರಿಂದಾಗಿ ಮತದಾರರ ಬಗ್ಗೆ ವ್ಯವಸ್ಥಿತ ಡಾಟಾ ಬೇಸ್‌ ಸೃಷ್ಟಿಸಿದಂತಾಗುತ್ತದೆ.
– ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ, ದ.ಕ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಎಲ್‌ಒಗಳು ಮನೆ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಮತದಾರರು ಸೂಕ್ತ ದಾಖಲೆ ನೀಡುತ್ತಿಲ್ಲ. ಕೆಲವು ಮನೆ/ಫ್ಲ್ಯಾಟ್‌ಗಳಲ್ಲಿ ಮತದಾರರು ದಿನವಿಡೀ ಲಭ್ಯವಾಗದಿರುವುದು ಕೂಡ ಸಮಸ್ಯೆಯಾಗಿದೆ.
– ಗಾಯತ್ರಿ, ಉಪ ಆಯುಕ್ತರು, ಕಂದಾಯ ವಿಭಾಗ, ಮಂಗಳೂರು ಮಹಾನಗರ ಪಾಲಿಕೆ


Advertisement

Udayavani is now on Telegram. Click here to join our channel and stay updated with the latest news.

Next