Advertisement

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

12:48 PM Oct 18, 2018 | |

ಯಾದಗಿರಿ: ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಅರ್ಹತಾ ದಿನಾಂಕ 2019ರ ಜನವರಿ 1ರಂತೆ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರ ಇರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಅ. 10ರಂದು ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟಿಸಿದ್ದು, ಮತದಾರರ ಪಟ್ಟಿ ಬಗ್ಗೆ ಯಾವುದೇ ದೂರು, ಆಕ್ಷೇಪಣೆಗಳಿದ್ದಲ್ಲಿ ನವೆಂಬರ್‌ 20ರೊಳಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರಡು ಮತರಾರರ ಪಟ್ಟಿ ಕುರಿತಂತೆ ನವೆಂಬರ್‌ 20ರ ವರೆಗೆ ಬರುವ ದೂರು, ಆಕ್ಷೇಪಣೆಗಳನ್ನು ಪರಿಶೀಲಿಸಿ ಡಿಸೆಂಬರ್‌ 20ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. 2019ರ ಜನವರಿ 4ರಂದು ಮತದಾರರ ಭಾವಚಿತ್ರ ಇರುವ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು. 

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ತಮ್ಮ ಹೆಸರನ್ನು ನಿಗದಿತ ನಮೂನೆ- 6ರಲ್ಲಿ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ/ಮೃತ ಪಟ್ಟಿದ್ದಲ್ಲಿ/ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಿಗದಿತ ಅರ್ಜಿ ನಮೂನೆ-7ರಲ್ಲಿ ಮತ್ತು ಮತದಾರರ ಪಟ್ಟಿಯಲ್ಲಿರುವ ನಮೂದುಗಳನ್ನು ಸರಿಪಡಿಸಲು ನಿಗದಿತ ಅರ್ಜಿ ನಮೂನೆ-8ರಲ್ಲಿ, ಅಲ್ಲದೇ ಒಂದೇ ಮತಕ್ಷೇತ್ರದ ಒಂದು ಮತಗಟ್ಟೆಯಿಂದ ಮತ್ತೂಂದು ಮತಗಟ್ಟೆಗೆ ಹೆಸರು ವರ್ಗಾವಣೆ ಮಾಡುವಂತಿದ್ದಲ್ಲಿ ನಿಗದಿತ ಅರ್ಜಿ ನಮೂನೆ-8(ಎ) ರಲ್ಲಿ ಸಲ್ಲಿಸಬಹುದು. 

ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು, ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರರ ಕಾರ್ಯಾಲಯ ಅಥವಾ ಮತದಾರರ ನೋಂದಣಾಧಿಕಾರಿಗಳು ಹಾಗೂ ಯಾದಗಿರಿ ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು.

ನಕಲಿ ಮತದಾರರು ಸೇರಿದಂತೆ ಯಾವುದೇ ದೂರು/ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ಸಂಧಿಬಸಿದ ಮತದಾರರ ನೋಂದಣಾಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಿದ ಅವರು, ಬೂತ್‌ ಮಟ್ಟದ ಏಜೆಂಟರನ್ನು ನೇಮಿಸುವ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆಗೆ ನೆರವಾಗಬೇಕು ಎಂದು ಕೋರಿದರು.

Advertisement

ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಈಗಾಗಲೇ ಶೇಕಡ 99.99 ರಷ್ಟು ಮತದಾರರ ಭಾವಚಿತ್ರಗಳನ್ನೊಳಗೊಂಡಿವೆ. ಶೇಕಡ 100ರಷ್ಟು ಭಾವಚಿತ್ರಗಳನ್ನೊಳಗೊಳ್ಳಲು ಕ್ರಮವಹಿಸಬೇಕು. ಹಾಗೆಯೇ ಮರಣ ಹೊಂದಿದವರು ಸೇರಿದಂತೆ ನಕಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 2019ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಎಲ್ಲಾ ಯುವಕ-ಯುವತಿಯರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಕಾರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಕ್ಟೋಬರ್‌ 10ರಂದು ಪ್ರಕಟಿಸಿರುವ ಜಿಲ್ಲೆಯ ಮತದಾರರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರಿಗೆ ವಿತರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ.ರಜಪೂತ, ಸಹಾಯಕ ಆಯುಕ್ತ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ, ಚುನಾವಣೆ ಶಾಖೆಯ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಶಿರಸ್ತೇದಾರರಾದ ಪರಶುರಾಮ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮರಿಗೌಡ ಪಾಟೀಲ ಹುಲ್ಕಲ್‌, ಯಾದಗಿರಿ ನಗರ ಬಿಜೆಪಿ ಅಧ್ಯಕ್ಷ ಹಣಮಂತ ಇಟಗಿ, ಜೆಡಿಎಸ್‌ ವಿಭಾಗೀಯ ಅಧ್ಯಕ್ಷ ಬಾಲಪ್ಪ ಚಿಕ್ಕಮೇಟಿ, ಬಿಎಸ್‌ಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಭಾಗಣ್ಣ ಎಸ್‌. ಉಪಸ್ಥಿತರಿದ್ದರು.

ಅಕ್ಟೋಬರ್‌ 10ರಂದು ಪ್ರಕಟಗೊಂಡಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 9,75,014 ಮತದಾರರಿದ್ದು, ಈ ಪೈಕಿ 4,87,799 ಪುರುಷ ಮತ್ತು 4,87,215 ಮಹಿಳಾ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 1,127 ಮತಗಟ್ಟೆ ಸ್ಥಾಪಿಸಲಾಗಿತ್ತು. ಗ್ರಾಮೀಣ ಪ್ರದೇಶದ ಮತಗಟ್ಟೆಯೊಂದರಲ್ಲಿ 1,300 ಮತ್ತು ನಗರ ಪ್ರದೇಶದ ಮತಗಟ್ಟೆಯೊಂದರಲ್ಲಿ 1,400 ಮತದಾರರು ಇರಬೇಕು. ಆದರೆ, ಕೆಲವೆಡೆ ಹೆಚ್ಚಿನ ಮತದಾರರಿದ್ದರಿಂದ 8 ಮತಗಟ್ಟೆ ಹೆಚ್ಚಿಸಲಾಗಿದೆ. ಈ ಮೂಲಕ ಈಗ ಜಿಲ್ಲೆಯಲ್ಲಿ ಮತದಾನ ಕೇಂದ್ರಗಳ ಸಂಖ್ಯೆ 1,135ಕ್ಕೆ ಏರಿಕೆಯಾಗಿದೆ.
 ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next