Advertisement

ಉಗ್ರರ ಐಇಡಿಗಿಂತ ಮತದಾರರ ಐಡಿಯೇ ಬಲಿಷ್ಠ: ಪಿಎಂ ಮೋದಿ

10:17 AM Apr 24, 2019 | Team Udayavani |

ಭಯೋತ್ಪಾದಕರ ಸುಧಾರಿತ ಸ್ಫೋಟಕಗಳಿಗಿಂತಲೂ (ಐಇಡಿ) ಮತದಾರರ ಗುರುತಿನ ಚೀಟಿ ಶಕ್ತಿಶಾಲಿ ಯಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಹಕ್ಕು ಚಲಾಯಿಸಲೆಂದು ಅಹಮದಾಬಾದ್‌ಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೀಗೆ ಹೇಳಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಅಹಮದಾಬಾದ್‌ನ ರಾನಿಪ್‌ ಪ್ರಾಂತ್ಯದ ನಿಶಾನ್‌ ಹೈಸ್ಕೂಲ್‌ನ ಬೂತ್‌ನಲ್ಲಿ ಮತ ಚಲಾವಣೆ ಮಾಡಿದ ಅನಂತರ ಮಾತನಾಡಿದ ಅವರು, “”ಭಾರತದ ಜನತಂತ್ರ ಜಗತ್ತಿಗೇ ಒಂದು ಮಾದರಿ. ಒಂದೆಡೆ, ಭಯೋತ್ಪಾದಕರು ತಮ್ಮ ಕೈಯಲ್ಲಿ ಐಇಡಿಗಳನ್ನು ಹಿಡಿದಿದ್ದಾರೆ. ಇತ್ತ, ಮತದಾರರು ತಮ್ಮ ಕೈಯಲ್ಲಿ ಮತದಾರರ ಗುರುತಿನ ಚೀಟಿ ಎಂಬ ಅಸ್ತ್ರ ಹಿಡಿದಿದ್ದಾರೆ. ಈ ಅಸ್ತ್ರ ಜನತಂತ್ರದ ಶಕ್ತಿಯ ಸಂಕೇತ” ಎಂದರು.

Advertisement

“”ಭಯೋತ್ಪಾದಕರ ಐಇಡಿಗಿಂತಲೂ ಜನರಲ್ಲಿರುವ ಮತದಾರರ ಗುರುತಿನ ಚೀಟಿಗಳೇ ಹೆಚ್ಚು ಶಕ್ತಿಶಾಲಿ ಎಂದು ನನಗನ್ನಿಸುತ್ತದೆ” ಎಂದರಲ್ಲದೆ, “”ಮತದಾನದ ಅನಂತರ ಕುಂಭಮೇಳದಲ್ಲಿ ಮಿಂದಾಗ ಉಂಟಾಗುವ ಪರಿಶುದ್ಧತೆಯ ಭಾವವೇ ಈಗಲೂ ನನ್ನನ್ನು ಆವರಿಸಿದೆ” ಎಂದರು. ಬೂತ್‌ ಇದ್ದ ನಿಶಾನ್‌ ಹೈಸ್ಕೂಲಿನವರೆಗೆ ತೆರೆದ ಜೀಪಿನಲ್ಲಿ ಪ್ರಯಾಣ ಬೆಳೆಸಿದ ಮೋದಿ, ಅಕ್ಕಪಕ್ಕ ನಿಂತಿದ್ದವರತ್ತ ಕೈಬೀಸಿದರು. ಮತದಾನಕ್ಕೆ ಹೊರಡುವ ಮುನ್ನ ತಮ್ಮ ಮನೆಯಲ್ಲಿ ತಾಯಿ ಹಿರಾಬೆನ್‌ರವರ ಆಶೀರ್ವಾದ ಪಡೆದರು. ಮನೆಯಲ್ಲಿ 20 ನಿಮಿಷ ಇದ್ದ ಮೋದಿಯವರಿಗೆ ಹಿರಾಬೆನ್‌ ಅವರು, ಶಾಲು, ತೆಂಗಿನ ಕಾಯಿ, ಸಿಹಿ ತಿನಿಸು ನೀಡಿ ಆಶೀರ್ವದಿಸಿದರು.

ಕಾಂಗ್ರೆಸ್‌ ದೂರು: ಪ್ರಧಾನಿ ಮೋದಿ ಮತ ಚಲಾವಣೆ ಸಂದರ್ಭದಲ್ಲಿ ರೋಡ್‌ಶೋ ಮಾಡುವ ಮೂಲಕ ಹಾಗೂ ರಾಜಕೀಯ ಹೇಳಿಕೆ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂ ಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ ಚುನಾವಣಾ ಆಯೋಗ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿದೆ.

ಕ್ಷಿಪಣಿ ಪ್ರಯೋಗಿಸದ ಕಾಂಗ್ರೆಸ್‌: ದೇಶದ ಭದ್ರತೆಯನ್ನು ಮರೆತು ನಾಮ್‌ದಾರ್‌ ಕುಟುಂಬದ ಹಿತಾಸಕ್ತಿಯನ್ನಷ್ಟೇ ನೋಡುತ್ತಿದ್ದ ಕಾಂಗ್ರೆಸ್‌ ತನ್ನ ಆಡಳಿತಾವಧಿಯಲ್ಲಿ ಉಪಗ್ರಹವನ್ನು ನಾಶಗೊಳಿಸುವ ಕ್ಷಿಪಣಿ ಪ್ರಯೋಗ ಮಾಡಿರಲಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ಟೀಕಿಸಿದ್ದಾರೆ. ಒಡಿಶಾದ ಬಾಲಸೋರ್‌ ಹಾಗೂ ಕೇಂದ್ರಪಾರಾದಲ್ಲಿ ಮಾತನಾಡಿದ ಮೋದಿ, ನಮ್ಮ ಸರಕಾರವು ಭಾರತದ ಬಾಹ್ಯಾಕಾಶ ಶಕ್ತಿಯನ್ನು ಪ್ರದರ್ಶಿಸಿ, ಸ್ಪೇಸ್‌ ಸೂಪರ್‌ ಪವರ್‌ ಆಗಿ ದೇಶ ಹೊರಹೊಮ್ಮಿದೆ ಎಂದಿದ್ದಾರೆ. ಈ ಮೂಲಕ ಬಾಲಸೋರ್‌ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದೆ. ಆದರೆ ಇದು ವಿಪಕ್ಷಗಳನ್ನು ಚಿಂತೆಗೀಡು ಮಾಡಿದೆ. ಎರಡು ಹಂತದ ಚುನಾವಣೆ ನಡೆದ ನಂತರ ದೇಶದಲ್ಲಿ ಬಿಜೆಪಿ ಪರ ಅಲೆ ಇರುವುದನ್ನು ಕಂಡು ಕಾಂಗ್ರೆಸ್‌ಗೆ ನಿದ್ದೆ ಬರದಂತಾಗಿದೆ ಎಂದರು.

ಹರಾಜಿಗಿಟ್ಟರೆ ಪ್ರಧಾನಿ ಹುದ್ದೆ ಖರೀದಿಸುತ್ತಿದ್ದರು ಮಮತಾ
ಪಶ್ಚಿಮ ಬಂಗಾಲದ ಅಸಾನ್‌ಸೋಲ್‌ನಲ್ಲೂ ರ್ಯಾಲಿ ನಡೆಸಿದ ಮೋದಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮಮತಾಗೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿದೆ. ಈ ಹುದ್ದೆಯನ್ನೇನಾದರೂ ಹರಾಜಿಗಿಟ್ಟಿದ್ದರೆ, ಚಿಟ್‌ ಫ‌ಂಡ್‌ ಸ್ಕ್ಯಾಮ್‌ನಲ್ಲಿ ಗಳಿಸಿದ ಹಣದಿಂದ ಖರೀದಿಯನ್ನೇ ಮಾಡಿ ಬಿಡುತ್ತಿದ್ದರು ಎಂದು ಮೋದಿ ಹೇಳಿದ್ದಾರೆ. ದೇಶಕ್ಕೆ ವಿಭಜನೆ (ಡಿವಿಶನ್‌) ಮಾಡುವ ಸರಕಾರ ಬೇಕಿಲ್ಲ. ದೃಷ್ಟಿಕೋನ (ವಿಶನ್‌) ಇರುವ ಸರಕಾರ ಬೇಕಿದೆ. ಟಿಎಂಸಿ ಆಡಳಿತದಲ್ಲಿ ಪ.ಬಂಗಾಲದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರ ಮತ್ತು ಅಪರಾಧ ಮಾತ್ರ. ಮೊದಲು ಮಮತಾಗೆ ವಲಸಿಗರೇ ಆಪ್ತರಾಗಿದ್ದರು. ಈಗಂತೂ ವಿದೇಶಿ ಯರನ್ನೂ ತನ್ನ ಪರ ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next