ತಿ.ನರಸೀಪುರ: ಸಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಟ್ಟೂರು ವರುಣಾ ವಿಧಾನಸಭಾ ಕ್ಷೇತ್ರದ ಹದಿನಾರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶನಿವಾರ ಪತ್ನಿ ಮಹದೇವಮ್ಮ(ವಿನೋದ) ಮತ್ತು ಪುತ್ರ ಅನಿಲ್‌ಬೋಸ್ ಅವರೊಂದಿಗೆ ಮತದಾನ ಮಾಡಿ ಮಾತನಾಡಿದ ಅವರು, ಜನಪ್ರತಿನಿಧಿ ಆಯ್ಕೆಗೆ ಸಮಾನತೆಯೊಂದಿಗೆ ಮತದಾನ ಮಾಡುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ ಎಂದರು.
ಜನಪರ ಉತ್ತಮ ಆಡಳಿತವನ್ನು ನೀಡುವ ಸರ್ಕಾರವನ್ನು ಅಧಿಕಾರಕ್ಕೆ ತರಲು ಮತದಾನದಲ್ಲಿ ಎಲ್ಲರೂ ಭಾಗವಹಿಸಿ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗುವ ಜನಪ್ರತಿನಿಧಿಗಳ ಸರ್ಕಾರ ಆಡಳಿತಕ್ಕೆ ಬರಬೇಕು. ಯಾವುದೇ ಪ್ರಚೋದನೆಗೆ ಒಳಗಾಗದೆ ನ್ಯಾಮಸಮ್ಮತವಾಗಿ ನಿರ್ಭೀತಿಯಿಂದ ಮತದಾನ ಮಾಡುವಂತೆ ಮಹದೇವಪ್ಪ ಕರೆ ನೀಡಿದರು.
ಗೆಲ್ಲುವ ವಿಶ್ವಾಸವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಮೂಲಕ ಉತ್ತಮ ಆಡಳಿತವನ್ನು ನೀಡಿದ್ದರಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ತಿ.ನರಸೀಪುರ ಕ್ಷೇತ್ರದಲ್ಲೂ ಎಲ್ಲಾ ವರ್ಗದ ಜನರು ಕೈ ಹಿಡಿಯುವ ವಿಶ್ವಾಸವಿರುವುದರಿಂದ ಈ ಬಾರಿಯೂ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಹೇಳಿದರು.
ಮತದಾನದ ನಂತರ ತಲಕಾಡು ಮತ್ತು ಮೂಗೂರು ಹೋಬಳಿಯ ವ್ಯಾಪ್ತಿಯಲ್ಲಿ ಸಂಚರಿಸಿ ಮುಖಂಡರಿಂದ ಚುನಾವಣೆಯ ಮಾಹಿತಿ ಪಡೆದುಕೊಂಡು ಮಾತನಾಡಿ, ವಿಪಕ್ಷಗಳ ವ್ಯಾಪಕ ಅಪ್ರಚಾರವನ್ನು ಅರಿತ ಮತದಾರರು ಮಹದೇವಪ್ಪಅಭಿವೃದ್ಧಿ ಕೆಲಸವನ್ನು ಅಂತಿಮವಾಗಿ ಬೆಂಬಲಿಸುವ ನಿರ್ಧಾರವನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ನರಸೀಪುರ ಅನ್ಯರ ಪಾಲಾಗಲ್ಲವೆಂಬ ವಿಶ್ವಾಸ ವೃದ್ಧಿಯಾಗಿದೆ. ಫಲಿಶಾಂಶದ ನಂತರ ಮತ್ತಷ್ಟು ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಬೋಸ್ ತಿಳಿಸಿದರು.