ಶ್ರೀನಿವಾಸಪುರ: ಪ್ರಜಾಪ್ರಭುತ್ವದಲ್ಲಿ ಮತದಾರನ ತೀರ್ಮಾನ ದೇಶದ ರಕ್ಷಣೆ-ಹಿತ ಕಾಪಾಡುತ್ತದೆ ಎಂಬುದನ್ನು ಅರಿತು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಚುನಾವಣಾ ಇಲಾಖೆಯಿಂದ ಮತದಾರರ ಸುರಕ್ಷಿತಾ ಸಂಘಗಳು ಮತ್ತು ಚುನಾವಣಾ ಜಾಗೃತಿ ಸಂಘಗಳ ಸಂಚಾಲಕರು ಹಾಗೂ ನೋಡಲ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ಸ್ವೀಪ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಏ.18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರ ಇದಾಗಿದೆ. 18 ವರ್ಷ ಮೇಲ್ಪಟ್ಟ ಯುವ ಮತದಾರರ ಸೇರ್ಪಡೆಗಾಗಿ ಏ.8 ರ ವರೆಗೆ ಕಾಲವಕಾಶವಿದೆ. ಪೋಷಕರು ವಿದ್ಯಾರ್ಥಿಗಳಾದಿಯಾಗಿ ಕಡ್ಡಾಯ ಮತದಾನ ಮಾಡಬೇಕು. ಕುಟುಂಬದಲ್ಲಿರುವ ಎಲ್ಲರೂ ತಮ್ಮ ಮತ ಚಲಾಯಿಸಲು ಪೋಷಕರಿಗೆ ವಿದ್ಯಾರ್ಥಿಗಳು ಪ್ರೋತ್ಸಾಹಿಸಬೇಕು.
ಮನೆಯಿಂದ ಹೊರಗೆ ಬಂದು ನಮ್ಮ ಮತ ನನ್ನ ಹಕ್ಕು ಎನ್ನುವುದು ಮರೆಯದೆ ಮತ ಹಾಕುವಮೂಲಕ ದೇಶದ ಭವಿಷತ್ತಿಗರೂವಾರಿಗಳಾಗಬೇಕೆಂದು ತಿಳಿಸಿದರು. ದೇಶದಲ್ಲಿ 90 ಕೋಟಿ ಮತದಾರರಿದ್ದರೂ ಮತದಾನ ಶೇ.60 ಆಗುತ್ತಿದ್ದು ನಮ್ಮ ಹಕ್ಕು ಚಲಾಯಿಸದಿದ್ದರೆ ನಾವು ತಪ್ಪಿತಸ್ಥರಾಗುತ್ತೇವೆ. ಶೇ.70 ಭಾಗದಷ್ಟು ಶೈಕ್ಷಣಿಕ ಪ್ರಜ್ಞಾವಂತರಿದ್ದರೂ ಮತದಾನ ಕ್ಷೀಣಿಸುತ್ತಿರುವುದು ನಮ್ಮ ದೌರ್ಭಾಗ್ಯ ಎಂದರು.
ಈ ಬಾರಿ ದೇಶದಲ್ಲಿ 6 ಕೋಟಿ ಯುವಕರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಇವಿಎಂ ಯಂತ್ರಗಳ ಮೂಲಕವೇ ಮತದಾನವಾಗುತ್ತದೆ. ಯಾವುದೇ ಕಾರಣಕ್ಕೂ ಬ್ಯಾಲೆಟ್ ಪೇಪರ್ ಬರುವುದಿಲ್ಲ. ಜ.16 ರಿಂದ ಅರ್ಜಿ ನೀಡಿದವರಿಗೆ ಗುರುತಿನ ಚೀಟಿ ನೀಡಲಾಗಿದೆ.
ಮತದಾನ ಮಾಡುವುದಕ್ಕೆ ವಿವಿಧ 11 ರೀತಿಯ ಗುರುತಿನ ಚೀಟಿಗಳು ತಂದು ಮತ ಚಲಾಯಿಸಲು ಅವಕಾಶ ಇರುತ್ತದೆ ಎಂದು ಹೇಳಿದರು. ಈ ಕಾರ್ಯಾಗಾರದಲ್ಲಿ ತಾಪಂ ಇಒ ವಿ.ನಾರಾಯಣಸ್ವಾಮಿ, ಬಿಇಒ ಷಂಷುನ್ನೀಸಾ, ತಾಲೂಕಿನ ನೋಡಲ್ ಅಧಿಕಾರಿಗಳು, ಬಿಎಲ್‌ಒ ಗಳು ಇದ್ದರು.