ಶಿಗ್ಗಾವಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾದುದು. ಪ್ರಮಾಣಿಕ ಹಾಗೂ ಕಡ್ಡಾಯವಾಗಿ
ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ದೇಶವನ್ನು ಗುಣಾತ್ಮಕವಾಗಿ ಸದೃಢಗೊಳಿಸಬೇಕು
ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಚಂದ್ರಶೇಖರ್ ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆ ಕೋಶದ ವತಿಯಿಂದ ಕಾಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ, ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಕಿವಿಮಾತು ಹೇಳಿದರು.
ಮತದಾರರು ಮತ ಚಲಾವಣೆಗಾಗಿ ಯಾವುದೇ ದಾಕ್ಷಣ್ಯಕ್ಕೆ, ಆಸೆ, ಅಮಿಷಕ್ಕೆ ಒಳಗಾಗಿ ಅತ್ಮವಂಚನೆ ಮಾಡಿಕೊಳ್ಳಬಾರದು. ಆ ರೀತಿಯಾದಲ್ಲಿ ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು ಹಾಕಿದಂತಾಗುತ್ತದೆ. ಆ ಕಾರಣದಿಂದ ಪ್ರತಿಯೊಬ್ಬರು ತಮ್ಮ ಮತ ಚಲಾಯಿಸಿ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಗ್ರಾಮಸ್ಥರಿಗೆ ತಿಳಿಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಮನಹಳ್ಳಿಯ ಗ್ರಾಮದ ಎಲ್ಲ ಓಣಿಯಲ್ಲೂ ಮೆರವಣಿಗೆ ನಡೆಸಿ, ಮತದಾನದ ಮಹತ್ವದ ಗೀತೆಗಳನ್ನು, ಘೋಷವಾಕ್ಯಗಳನ್ನು ಮೆರವಣಿಗೆಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಗ್ರಾಮದ ಜನರ ಗಮನ ಸೆಳೆದರು ಹಾಗೂ ಮತದಾನದ ಮಹತ್ವ ಅರಿವು ಮೂಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ| ಮಲ್ಲಿಕಾರ್ಜುನ ಮಾನ್ಪಡೆ ಅಭಿಯಾನದ ನೇತೃತ್ವ ವಹಿಸಿದ್ದರು. ವಿಶ್ವವಿದ್ಯಾಲಯದ ಎಲ್ಲ ಶೈಕ್ಷಣಿಕ ವಿಭಾಗ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.