Advertisement

ನಿಮಗಾಗಿ ಕೆಲಸ ಮಾಡಿದವರಿಗೆ ಮತ ಹಾಕಿ

03:06 PM Aug 30, 2018 | |

ಬಾಗಲಕೋಟೆ: ಅಧಿಕಾರ ವಿಕೇಂದ್ರೀಕರಣ ವಿರೋಧಿಸುವ ಬಿಜೆಪಿಗರಿಗೆ ಯಾರೂ ಮತ ಹಾಕಬೇಡಿ. ದುರ್ಬಲರಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕಾಂಗ್ರೆಸ್‌. ಹೀಗಾಗಿ ಯಾರು ನಿಮಗಾಗಿ ಕೆಲಸ ಮಾಡಿದ್ದಾರೋ ಅವರಿಗೆ ಮತ ಹಾಕಿ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಮನವಿ ಮಾಡಿದರು. ಬಾದಾಮಿ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ವಿಧಾನಪರಿಷತ್‌ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿದ್ದು ರಾಜೀವ ಗಾಂಧಿ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮಹಿಳೆಯರು, ದಲಿತರು, ಹಿಂದುಳಿದವರು, ಮುಸ್ಲಿಂರು ಸಹಿತ ದುರ್ಬಲರಿಗೂ ಅಧಿಕಾರ ಸಿಗುವಂತೆ ಮಾಡಿದ್ದಾರೆ. ರಾಜ್ಯದ ಸ್ಥಳೀಯ ಸಂಸ್ಥೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹಲವು ಕೊಡುಗೆ ನೀಡಿದೆ. ಆದರೆ, ಬಿಜೆಪಿಯವರು, ಈ ದೇಶದ ಸಂವಿಧಾನ, ಮೀಸಲಾತಿ, ಅಧಿಕಾರ ವಿಕೇಂದ್ರೀಕರಣ ವಿರೋಧ ಮಾಡುತ್ತಾರೆ. ಅಂತಹವರಿಗೆ ನೀವು ಮತ ಕೊಡಬೇಕಾ ಎಂದು ಪ್ರಶ್ನಿಸಿದರು.

ಶೇ.70ರಷ್ಟು ಕಾಂಗ್ರೆಸ್ಸಿಗರು: ವಿಧಾನ ಪರಿಷತ್‌ ಉಪಚುನಾವಣೆಗೆ ಎರಡು ಜಿಲ್ಲೆಯಲ್ಲಿ ಒಟ್ಟು 8016 ಜನ ಮತದಾರರಿದ್ದಾರೆ. ನಾನೊಬ್ಬ ಮಾಜಿ ಸಿಎಂ ಆಗಿದ್ದರೂ ನನ್ನ ಮತ ಹಾಗೂ ಒಬ್ಬ ಗ್ರಾ.ಪಂ. ಸದಸ್ಯನ ಮತಕ್ಕೂ ಒಂದೇ ಮೌಲ್ಯವಿದೆ. ಇದು ಕಾಂಗ್ರೆಸ್‌ ಸರ್ಕಾರ ನೀಡಿದ ಪ್ರಜಾಪ್ರಭುತ್ವ ಆಡಳಿತದ ಕೊಡುಗೆ. ನಾನು ಮಾಜಿ ಸಿಎಂ ಎಂದು ನನ್ನ ಮತಕ್ಕೆ ಹೆಚ್ಚಿನ ಮೌಲ್ಯವಿಲ್ಲ. ಈ ಚುನಾವಣೆಯಲ್ಲಿ ಎಲ್ಲರ ಮತಕ್ಕೂ ಒಂದೇ ಮೌಲ್ಯವಿದೆ ಎಂದರು. ಬಾದಾಮಿ ಕ್ಷೇತ್ರ ವ್ಯಾಪ್ತಿಯಲ್ಲಿ 571 ಜನ ಮತದಾರರಿದ್ದಾರೆ. ಅವಳಿ ಜಿಲ್ಲೆಯ ಒಟ್ಟು ಮತದಾರರಲ್ಲಿ ಶೇ.70ರಷ್ಟು ಕಾಂಗ್ರೆಸ್‌ ಪರವಾಗಿದ್ದಾರೆ. ಅಲ್ಲದೇ ಜೆಡಿಎಸ್‌ ಪಕ್ಷದವರೂ ನಮಗೆ ಬೆಂಬಲ ಕೊಟ್ಟಿದ್ದಾರೆ. ಇದರಿಂದ ನಮಗೆ ಇನ್ನಷ್ಟು ಬಲ ಬಂದಿದ್ದು, ಸುನೀಲಗೌಡ ಪಾಟೀಲ ಗೆಲುವು ನಿಶ್ಚಿತ ಎಂದು ಹೇಳಿದರು.

ಗದ್ದಿಗೌಡ್ರನ್ನ ಎಷ್ಟು ಬಾರಿ ಗೆಲ್ಸತ್ತೀರಿ: ಬಾಗಲಕೋಟೆಯ ಲೋಕಸಭೆ ಸದಸ್ಯರಾಗಿರುವ ಗದ್ದಿಗೌಡರು, ಮೂರು ಬಾರಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಗೆದ್ದರೂ ಜಿಲ್ಲೆಗೆ ಅವರೇನು ಮಾಡಿದ್ದಾರೆ. ಜಿಲ್ಲೆಯವರು ಗದ್ದಿಗೌಡರನ್ನು ಎಷ್ಟು ಬಾರಿ ಗೆಲ್ಲಿಸುತ್ತೀರಿ. ಈ ಬಾರಿ ಬಾಗಲಕೋಟೆ ಲೋಕಸಭೆಗೆ ಕಾಂಗ್ರೆಸ್‌ ಅಭ್ಯರ್ಥಿಯೇ ಗೆಲ್ಲಬೇಕು. ಅದಕ್ಕಾಗಿ ಈಗಿನ ಪರಿಷತ್‌ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಈ ಚುನಾವಣೆ, ಲೋಕಸಭೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.

ವಿಧಾನಪರಿಷತ್‌ ಉಪ ಚುನಾವಣೆಗೆ ನನಗೂ ಮತದಾನದ ಹಕ್ಕಿದೆ. ಆದರೆ, ನಾನು ವಿದೇಶಕ್ಕೆ ತೆರಳುತ್ತಿರುವುದರಿಂದ ನನ್ನ ಮತ ಹಾಕಲು ಆಗುತ್ತಿಲ್ಲ. ಆದರೆ, ನನ್ನ ಕ್ಷೇತ್ರದಲ್ಲಿ 571 ಮತದಾರರಲ್ಲಿ ಅತಿ ಹೆಚ್ಚು ಜನರು ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವರಾದ ಎಂ.ಬಿ. ಪಾಟೀಲ, ಎಸ್‌. ಆರ್‌. ಪಾಟೀಲ, ಉಮಾಶ್ರೀ, ಎಚ್‌.ವೈ. ಮೇಟಿ, ಅಭ್ಯರ್ಥಿ ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ, ಎಸ್‌.ಜಿ. ನಂಜಯ್ಯನಮಠ, ರಾಜು ಆಲಗೂರ, ವಿಠ್ಠಲ  ಕಟಕದೊಂಡ, ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಜಯಪುರ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next