ಮೈಸೂರು: ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪನವರ ವಿರುದ್ಧ ಹಾಗೂ ರೈತರ ಪ್ರಣಾಳಿಕೆಗೆ ಬದ್ಧರಾಗಿರುವ ಅಭ್ಯರ್ಥಿಗಳಿಗೆ ಮತದಾನ ಮಾಡುವ ಕುರಿತು ರೈತರಲ್ಲಿ ಅರಿವು ಮೂಡಿಸಲು ರೈತ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚುನಾವಣಾಧಿಕಾರಿಗಳು ತಡೆಯೊಡ್ಡಿದ ಪ್ರಸಂಗ ನಡೆಯಿತು.
ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿದ್ದು, ಹೀಗಾಗಿ ಚುನಾವಣೆಯಲ್ಲಿ ರೈತರ ಜಾಗೃತಿ ಮೂಡಿಸಲು ರಾಜ್ಯ ರೈತ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಗುರುವಾರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಅಭಿಯಾನದ ಅಂಗವಾಗಿ ನಗರದ ಗನ್‌ಹೌಸ್ ವೃತ್ತದಿಂದ ಆರಂಭಗೊಂಡ ಬೈಕ್ ರ್ಯಾಲಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಚಾಲನೆ ನೀಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ಚುನಾವಣಾಧಿಕಾರಿಗಳು ಅನುಮತಿ ನೀಡದ ಹಿನ್ನೆಲೆಯಲ್ಲಿ ರ್ಯಾಲಿ ನಡೆಸಲು ನಿರಾಕರಿಸಿದರು. ಆದರೆ ಇದಕ್ಕೆ ಒಪ್ಪದ ರೈತರು ಶತಾಯಗತಾಯ ಬೈಕ್ ರ್ಯಾಲಿ ನಡೆಸುವುದಾಗಿ ಪಟ್ಟು ಹಿಡಿದರು. ಆದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಎಲ್ಲಾ ರೈತರು ಗನ್‌ಹೌಸ್ ಸಮೀಪದಲ್ಲಿರುವ ಉದ್ಯಾನದಲ್ಲಿ ಕುಳಿತು ಸಭೆ ನಡೆಸಿದರು.
ರೈತರ ಪ್ರತಿಭಟನೆ: ರ್ಯಾಲಿ ನಡೆಸಲು ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು ಅನುಮತಿ ನೀಡಿದ್ದರು. ಈಗ ಏಕಾಏಕಿ ರ್ಯಾಲಿಗೆ ಅಡ್ಡಿಪಡಿಸಿದ್ದಲ್ಲದೇ ರ್ಯಾಲಿ ನಡೆಸಿದರೆ ಎಲ್ಲರನ್ನೂ ಬಂಧಿಸುವ ಬೆದರಿಕೆ ಹಾಕಿದ್ದಾರೆ. ಆದರೆ ನಗರದಲ್ಲಿ ಸಿನಿಮಾ ತಾರೆಯರು ಪಕ್ಷದ ಪರವಾಗಿ ಹಾಗೂ ವ್ಯಕ್ತಿಯ ಪರವಾಗಿ ಪ್ರಚಾರ ನಡೆಸಿದ್ದಾರೆ. ನಾವು ರೈತರ ಪ್ರಣಾಳಿಕೆಗೆ ಬದ್ಧರಾಗಿರುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ರೈತ ಜಾಗೃತಿ ಅಭಿಯಾನ ನಡೆಸಲು ಅನುಮತಿ ನೀಡದಿರುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ರೈತರಿಗೆ ಸೋಲಿಸೋದು ಗೊತ್ತಿದೆ: ರೈತರಿಗೆ ಗೆಲ್ಲಿಸೋದು ಗೊತ್ತಿಲ್ಲದಿದ್ದರೂ, ಸೋಲಿಸುವುದು ಗೊತ್ತಿದೆ. ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪ ಅವರನ್ನು ಸೋಲಿಸುವುದು ನಮ್ಮ ಗುರಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ರೈತ ಜಾಗೃತಿ ಅಭಿಯಾನದ ಬೈಕ್ ರ್ಯಾಲಿ ವೇಳೆ ಸುದ್ದಿಗಾರರೊಂದಿಗೆ ಮಾತಮಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಐದು ವರ್ಷಗಳಿಂದ ರೈತರಿಗೆ ಯಾವುದೇ ಪ್ರೋತ್ಸಾಹ ನೀಡಿಲ್ಲ. ನ್ಯಾಯಕ್ಕಾಗಿ ಹೋರಾಡಿದ ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು, ಅವರಿಗೆ ಬೇಕಾದವರ ವಿರುದ್ಧದ ದೂರುಗಳನ್ನು ಹಿಂಪಡೆದಿದ್ದಾರೆ.
ಕಳೆದ ಬಾರಿ ವರುಣದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸಿದ್ದರಾಮಯ್ಯ, ಇದೀಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ವರುಣಾ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ನಮ್ಮದು ಯಾವ ಪಕ್ಷದ ಪರ ಪ್ರಚಾರವಲ್ಲ. ಬದಲಿಗೆ ನಮ್ಮ ಪ್ರಣಾಳಿಕೆ ಒಪ್ಪಿದವರಿಗೆ ಬೆಂಬಲ ನೀಡುತ್ತೇವೆ. ಆದ್ದರಿಂದ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಹಾಗೂ ತಿ.ನರಸೀಪುರದಲ್ಲಿ ಜೆಡಿಎಸ್‌ನ ಅಶ್ವಿನ್‌ಕುಮಾರ್‌ರಿಗೆ ನಮ್ಮ ಬೆಂಬಲವಿದೆ ಎಂದರು.