Advertisement

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

12:37 AM Oct 24, 2020 | mahesh |

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ 5 ದಿನಗಳು ಬಾಕಿಯಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ. ಶುಕ್ರವಾರ ಇಬ್ಬರೂ ನಾಯಕರು ರಾಜ್ಯದ ವಿವಿಧೆಡೆ ಸರಣಿ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಿದ್ದಾರೆ.

Advertisement

ರೋಹ್ತಾಸ್‌, ಗಯಾ ಮತ್ತು ಭಾಗಲ್ಪುರ ಜಿಲ್ಲೆಗಳಲ್ಲಿ ಬೃಹತ್‌ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ತ್ರಿವಳಿ ತಲಾಖ್‌ ಕಾಯ್ದೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಗಾಲ್ವಾನ್‌ನಲ್ಲಿ ಸೇನಾ ಕಾರ್ಯಾಚರಣೆ ಸೇರಿದಂತೆ ವಿವಿಧ ವಿಚಾರಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿದ್ದು ಕಂಡುಬಂತು. ಇನ್ನೊಂದೆಡೆ, ರಾಹುಲ್‌ ಗಾಂಧಿ ಅವರು, ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರು ಪಟ್ಟ ಕಷ್ಟ, ನಿರುದ್ಯೋಗ, ಗಡಿ ಬಿಕ್ಕಟ್ಟು ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬಿಹಾರಕ್ಕೆ ಅವಮಾನ: ನಮ್ಮ ಸರಕಾರ 370ನೇ ವಿಧಿ ರದ್ದು ಮಾಡಿದ್ದರೆ, ಅವರು (ಪ್ರತಿಪಕ್ಷಗಳು) ಆ ವಿಧಿಯನ್ನು ಪುನಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ. ಬಿಹಾರದ ಜನರಾದ ನೀವು ನಿಮ್ಮ ಮಕ್ಕಳನ್ನು ದೇಶವನ್ನು ರಕ್ಷಿಸಲೆಂದು ಗಡಿಗೆ ಕಳುಹಿಸುತ್ತಿರುವಾಗ, 370ನೇ ವಿಧಿ ಮರುಸ್ಥಾಪಿಸುವುದಾಗಿ ಹೇಳುತ್ತಿರುವ ಪ್ರತಿಪಕ್ಷಗಳು ನಿಮ್ಮ ಬಳಿ ಮತ ಕೇಳಲು ಹೇಗೆ ತಾನೇ ಬರುತ್ತಾರೆ? ಇದು ಬಿಹಾರದ ಜನರಿಗೆ ಮಾಡುತ್ತಿರುವ ಅವಮಾನವಲ್ಲವೇ ಎಂದು ಮೋದಿ ಪ್ರಶ್ನಿಸಿದ್ದಾರೆ. ಗಾಲ್ವಾನ್‌ ಘರ್ಷಣೆ ಕುರಿತು ಪ್ರಸ್ತಾಪಿಸಿದ ಅವರು, ಬಿಹಾರದ ಪುತ್ರರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟಿದ್ದಾರೆ. ಭಾರತಮಾತೆಯು ತಲೆತಗ್ಗಿಸದಂತೆ ನೋಡಿಕೊಂಡಿದ್ದಾರೆ ಎಂದೂ ಮೋದಿ ಸ್ಮರಿಸಿದ್ದಾರೆ.

ಇದೇ ವೇಳೆ, ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಅವರ ಹೆಸರನ್ನೆತ್ತದೇ ಪರೋಕ್ಷವಾಗಿ ಅವರನ್ನು ಪ್ರಸ್ತಾಪಿಸಿದ ಮೋದಿ, “ಕೆಲವರು ನಿಮ್ಮಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆದರೆ, ಬಿಹಾರಿಗರಲ್ಲಿರುವ ಒಂದು ಶ್ರೇಷ್ಠ ಗುಣವೆಂದರೆ ಸ್ಪಷ್ಟತೆ. ಹೀಗಾಗಿ ಅವರು ಖಂಡಿತಾ ಗೊಂದಲಕ್ಕೀಡಾಗು ವುದಿಲ್ಲ ಎಂಬ ನಂಬಿಕೆಯಿದೆ’ ಎಂದಿದ್ದಾರೆ.

ಲಾಲು ವಿರುದ್ಧ ಕಿಡಿ: ಈಗ ಜನರು ಭಯವಿಲ್ಲದೇ ಬದುಕುವಂತಾಗಿದೆ. ಹಿಂದೊಂದು ಕಾಲವಿತ್ತು. ಆಗ ಸೂರ್ಯ ಮುಳುಗುತ್ತಿದ್ದಂತೆ ಇಡೀ ರಾಜ್ಯ ಸ್ತಬ್ಧವಾಗುತ್ತಿತ್ತು. ಗೂಂಡಾಗಿರಿ, ಡಕಾಯಿತಿ, ಕೊಲೆ, ವಸೂಲಿಗಳೇ ನಡೆಯುತ್ತಿದ್ದವು. ಬಿಹಾರವನ್ನು ರೋಗಗ್ರಸ್ತ ರಾಜ್ಯವನ್ನಾಗಿ ಮಾಡಿದವರನ್ನು ಮತ್ತೂಮ್ಮೆ ಅಧಿಕಾರಕ್ಕೆ ಬರಲು ಬಿಡಬೇಡಿ ಎನ್ನುವ ಮೂಲಕ ಆರ್‌ಜೆಡಿ ವರಿಷ್ಠ ಲಾಲು ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ ಮೋದಿ.

Advertisement

ಪ್ರಚಾರ ರ್ಯಾಲಿ ಆರಂಭಿಸುವುದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಹಾಗೂ ಆರ್‌ಜೆಡಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ರಘುವಂಶ ಪ್ರಸಾದ್‌ ಸಿಂಗ್‌ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಯೋಧರಿಗೆ ಅವಮಾನ: ರಾಹುಲ್‌ ಗಾಂಧಿ ಆರೋಪ
ಭಾಗಲ್ಪುರದಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಲಡಾಖ್‌ನಲ್ಲಿ ಚೀನ ಸೇನೆ ಅತಿಕ್ರಮಣವನ್ನೇ ಮಾಡಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಬಿಹಾರದ ಹುತಾತ್ಮರಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದೆ. ಇದು ಈ ಹಿಂದೆ ಮೋದಿಯವರು ನೀಡಿದ “ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ.’ ಮಾದರಿಯ ಆಶ್ವಾಸನೆಯಾಗಿದೆ. ಕಾರ್ಮಿಕರ ಬಗ್ಗೆ ಒಲವಿರುವಂತೆ ತೋರಿಸುತ್ತಿರುವ ಮೋದಿ, ಲಾಕ್‌ಡೌನ್‌ ಅವಧಿಯಲ್ಲೇಕೆ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದೂ ರಾಹುಲ್‌ ಪ್ರಶ್ನಿಸಿದ್ದಾರೆ.

ನ.9ರಂದು ನನ್ನ ತಂದೆ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಅದರ ಮಾರನೇ ದಿನವೇ ನಿತೀಶ್‌ ಕುಮಾರ್‌ ಅಧಿಕಾರದಿಂದ ನಿರ್ಗಮಿಸುತ್ತಾರೆ.
ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next