ಹಣ, ಜಾತಿ, ವೋಟು ಈ ವಿಷಯ ಇಟ್ಟುಕೊಂಡು ಈಗಾಗಲೇ ಹಲವು ಸಿನಿಮಾಗಳು ಬಂದು ಹೋಗಿವೆ. ಆ ಸಾಲಿಗೆ ಈಗ ಹೊಸಬರ “ವೋಟ್ ಪಾರ್ ಇಂಡಿಯಾ’ ಎಂಬ ಹೊಸ ಚಿತ್ರವೂ ಸೇರಿದೆ. ನೋಟು ಅಮಾನ್ಯ ಬಳಿಕ ಆದಂತಹ ಘಟನೆಗಳೇನು, ಸಾರ್ವಜನಿಕರಿಗೆ ಎಷ್ಟೆಲ್ಲಾ ತೊಂದರೆ ಉಂಟಾಯಿತು. ಅದಕ್ಕೆ ಮುಖ್ಯ ಕಾರಣ ಯಾರು ಎಂಬ ವಿಷಯ ಕುರಿತಂತೆ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಅಂದಹಾಗೆ, ಈ ಚಿತ್ರದ ಮೂಲಕ ಶಾಂತು ಯಾದವ್ ನಿರ್ದೇಶಕರಾಗುತ್ತಿದ್ದಾರೆ.
ನೋಟಿನ ಸುದ್ದಿ ಎಲ್ಲೆಡೆ ಸದ್ದು ಮಾಡಿದ್ದೇ ತಡ, ಆ ನೋಟಿನ ವಿಷಯ ಇಟ್ಟುಕೊಂಡು, ವೋಟಿನ ಕಥೆ ಹೇಳಲು ಹೊರಟಿದ್ದಾರೆ ಶಾಂತು. ನೋಟು ರದ್ದು ಪ್ರಕರಣದ ವಿಷಯ ಹೇಳುವುದರ ಜತೆಯಲ್ಲೇ ವೋಟಿನ ಮಹತ್ವ ಕುರಿತು ಒಂದಷ್ಟು ಹೊಸ ಸಂಗತಿಗಳನ್ನು ಬಿಚ್ಚಿಡುವ ಪ್ರಯತ್ನ ಈ ಸಿನಿಮಾ ಮೂಲಕ ಆಗಲಿದೆ ಎಂಬುದು ಅವರ ಮಾತು. ಇನ್ನು, “ಶ್ರೀರಂಗ ಸಿನಿಮಾಸ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದು ಮಾಡಿದ ಬಗ್ಗೆ ಹೇಳಿದ ಮಾತಿನ ದೃಶ್ಯಗಳ ತುಣುಕು, ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿದ್ದ ಗ್ರಾಹಕರ ಚಿತ್ರಣ ಇಟ್ಟುಕೊಂಡ ಟೀಸರ್‌ವೊಂದನ್ನು ರಿಲೀಸ್ ಮಾಡಿದ ಚಿತ್ರತಂಡ, ನೋಟು ಅಮಾನ್ಯವಾದ ನಂತರ ಒಂದಷ್ಟು ಬ್ಯಾಂಕ್‌ಗಳು ಕಾನೂನು ಬಾಹಿರ ಚಟುವಟಿಕೆ ನಡೆಸುವ ಮೂಲಕ ಕಪ್ಪುಹಣವನ್ನು ಬಿಳಿ ಹಣವನ್ನಾಗಿಸಿವೆ. ಇದರಿಂದ ಜನರಿಗೆ ಸಮಸ್ಯೆಯಾಗಿದ್ದು ನಿಜ. ಅದೆಲ್ಲಾ ಆಗಿದ್ದು ಹೇಗೆ, ಎಂಬಿತ್ಯಾದಿ ಕುರಿತು ಚಿತ್ರದಲ್ಲಿ ವಿವರವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆಯಂತೆ.
ನಿರ್ಮಾಪಕಿ ಪ್ರೇಮಾ ರಂಗನಾಥ್ ಅವರ ಪುತ್ರ ಕಾರ್ತಿಕ್ ಚಿತ್ರದ ನಾಯಕ. ಇವರೊಂದಿಗೆ ರಕ್ಷಕ್ ಕೂಡ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಅಮ್ಮಳ್ಳಿ ದೊಡ್ಡಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. “ಮತ ಹಾಕುವಾಗ ದೇಶದ ಬಗ್ಗೆ ಪ್ರತಿಯೊಬ್ಬ ಮತದಾರ ಯೋಚಿಸಬೇಕು, ಹಣ, ಜಾತಿ ನೋಡಿ ಮತ ಹಾಕಬಾರದು ಎಂದ ಸಣ್ಣದ್ದೊಂದು ಸಂದೇಶ ಚಿತ್ರದಲ್ಲಿದೆ ಎಂಬುದು ಮಹೇಶ್ ಮಾತು.
ನಿರ್ಮಾಪಕ ಭಾ.ಮಾ. ಹರೀಶ್, ಮಮತಾಶ್ರೀ ಇತರರು ಚಿತ್ರತಂಡಕ್ಕೆ ಶುಭಕೋರಿದ್ದಾರೆ. ದೀಪಿಕಾ ಅವಿನಾಶ್ ಹಾಗೂ ಅವಿನಾಶ್ ಸಹ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಜನವರಿ 21ರಿಂದ ಶೂಟಿಂಗ್ ಶುರುವಾಗುತ್ತಿದ್ದು, ಏಪ್ರಿಲ್ ಹೊತ್ತಿಗೆ ಚಿತ್ರವನ್ನು ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ.