Advertisement

ಆಸೆ ಆಮಿಷಕ್ಕೆ ಬಲಿಯಾಗದೆ ಪ್ರಾಮಾಣಿಕರಿಗೆ ಮತ ಚಲಾಯಿಸಿ

04:29 PM Jan 28, 2018 | |

ಬಸವನಬಾಗೇವಾಡಿ: ಭಾರತದ ಭವಿಷ್ಯ ನಮ್ಮ ಇಂದಿನ ಯುವಕರ ಕೈಯಲ್ಲಿದೆ. ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಮಾಡುವ ಮುನ್ನ ಭಾರತವನ್ನು ಮುನ್ನಡೆಸುವ ವ್ಯಕ್ತಿಗೆ ಮತದಾನ ಚಲಾಯಿಸಬೇಕು ಎಂಬ ಅರಿವಿ ಇರಬೇಕು ಹಿರಿಯ ಸಿವಿಲ್‌ ನ್ಯಾಯಾಧೀಶೆ ರೇಣುಕಾ ರಾಯ್ಕರ್‌ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಂದಾಯ ಇಲಾಖೆ, ಕಾನೂನು ಸೇವೆಗಳ ಸಮಿತಿ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರ ದಿನಾಚಾರಣೆ ಹಾಗೂ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಯುವ ಮತದಾರರು ತಮ್ಮ ಮುಂದಿನ ಜವಾಬ್ದಾರಿ ಅರಿತುಕೊಂಡು ಮತದಾನ ಮಾಡಬೇಕು. ಆಸೆ, ಅಮಿಷ, ಒತ್ತಡಗಳಿಗೆ ಬಲಿಯಾಗದೇ ನೈತಿಕತೆಯಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾದರೆ ನಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.

ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕಾದರೆ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ನಾವು ಮತದಾರರಾಗಿರುವುದಕ್ಕೆ ಹೆಮ್ಮೆ ಪಡಬೇಕು. ಮತದಾನ ಮಾಡಲು ಸಿದ್ಧರಾಗಬೇಕು ಎಂದು ಹೇಳಿದರು.

ವಕೀಲ ಡಿ.ಎಸ್‌. ಪವಾರ ಮಾತನಾಡಿ, ಚುನಾವಣೆ ಮಹತ್ವ ತಿಳಿಸುವುದಕ್ಕಾಗಿ ಶಾಲಾ, ಕಾಲೇಜುಗಳಲ್ಲಿ ಪ್ರತಿನಿಧಿಗಳ ಆಯ್ಕೆಯಾಗಿ ಚುನಾವಣೆ ನಡೆಸಲಾಗುತ್ತಿದೆ. ಮತ ಚಲಾವಣೆಗೆ ತಾತ್ಸಾರ ಮನೋಭಾವನೆ ಬೇಡ, ತಾತ್ಸಾರ ಮಾಡಿದರೆ ಸಮರ್ಥರಲ್ಲದವರು ಆಯ್ಕೆಯಾಗುತ್ತಾರೆ ಎಂದು ಹೇಳಿದರು. 

Advertisement

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಶಿವರಾಜು ಎಚ್‌.ಎಸ್‌., ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಸ್‌.ಆರ್‌. ಮಠ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಣ್ಣ ಎಚ್‌, ಗ್ರೇಡ್‌-2 ತಹಶೀಲ್ದಾರ್‌ ಪಿ.ಜಿ. ಪವಾರ, ಹಿರಿಯ ವಕೀಲರಾದ
ಬಿ.ಆರ್‌. ಅಡ್ಡೋಡಗಿ, ಬಿ.ಕೆ. ಕಲ್ಲೂರ, ಅಪರ ಸರಕಾರಿ ಅಭಿಯೋಜಕ ಸಿ.ಆರ್‌. ಸುಭಾನಪ್ಪರ ವೇದಿಕೆಯಲ್ಲಿದ್ದರು.

ಪಿ.ಎಲ್‌. ಹಿರೇಮಠ ಸ್ವಾಗತಿಸಿದರು. ಡಿ.ಬಿ. ಡೆಂಗನವರ ನಿರೂಪಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್‌.ಬಿ. ಗಣಕುಮಾರ ವಂದಿಸಿದರು. ಕಾರ್ಯಕ್ರಮದಲ್ಲಿ ರಸಪ್ರಶ್ನೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next