ಬೆಂಗಳೂರು: ದಿ ಹೋಮಿಯೋಪತಿ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಬುಧವಾರ ಪುರಭವನದ ಮುಂಭಾಗ ವಿಶ್ವ ಹೋಮಿಯೋಪತಿ ದಿನಾಚರಣೆ ಹಾಗೂ ಮತ ಜಾಗೃತಿ ಕಾರ್ಯಕ್ರಮ ನಡೆಯಿತು.
ಹೋಮಿಯೋಪತಿ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ಬಿ.ಟಿ.ರುದ್ರೇಶ್, ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ನಟಿ ರೂಪಿಕಾ ಅವರು ಹೋಮಿಯೋಪತಿ ಜನಕ “ಸ್ಯಾಮ್ಯುಯೆಲ್ ಹಾನಿಮಾನ್’ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಆನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ವೇಳೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ದೇಶದ ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ತಪ್ಪದೆಯೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು. ಯಾವುದೇ ಕ್ರೀಡೆಯ ಗೆಲುವಿನಲ್ಲಿ ಹೇಗೆ ಒಂದು ಅಂಕವೂ ಮಹತ್ವದ್ದಾಗಿರುತ್ತದೆಯೋ ಅದೇ ರೀತಿ ದೇಶದ ಪ್ರಜಾಪ್ರಭುತ್ವ ಗೆಲುವು ಸಾಧಿಸಲು ಪ್ರತಿಯೊಬ್ಬರು ಮತದಾನ ಮಾಡುವುದು ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು.
ಹೋಮಿಯೋಪತಿ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ವೈದ್ಯಕೀಯ ಮತ್ತು ಔಷಧ ಪದ್ಧತಿಯಲ್ಲಿ ಹೋಮಿಯೋಪತಿಗೆ ಉನ್ನತ ಸ್ಥಾನವಿದೆ. 2020ರ ವೇಳೆಗೆ ಉತ್ತಮ ಆರೋಗ್ಯಕ್ಕಾಗಿ ಹೋಮಿಯೋಪತಿಯನ್ನೇ ಹೆಚ್ಚು ಅವಲಂಭಿಸುವ ಸಂದರ್ಭ ಬರಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 35,000 ಆಯುರ್ವೇದ ವೈದ್ಯರಿದ್ದು, 600 ಆಯುರ್ವೇದ ಘಟಕಗಳು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, 13,000 ಹೋಮಿಯೋಪಥಿ ವೈದ್ಯರಿದ್ದು, ಕೇವಲ 40 ತಾತ್ಕಾಲಿಕ ಹೋಮಿಯೋಪತಿ ಘಟಕಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದ್ದು,
ಕನಿಷ್ಠ 150 ಘಟಕಗಳನ್ನಾದರೂ ಕೊಡಬೇಕು ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ, ಉಪನಿರ್ದೇಶಕ ಡಾ. ಸಿ.ಬಿ. ನಂಜರಾಜು ಮತ್ತಿತರರು ಉಪಸ್ಥಿತರಿದ್ದರು.