Advertisement

ಬಿಜೆಪಿಯ ಕಮಲ ಚಿಹ್ನೆಯ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ:ಪುತ್ತೂರಿನಲ್ಲಿ ಯೋಗಿ ಕರೆ

06:08 PM May 07, 2023 | Team Udayavani |

ಪುತ್ತೂರು : ಬಿಜೆಪಿಯು ತನ್ನ ಸಾಮಾನ್ಯ ಕಾರ್ಯಕರ್ತನ ರೂಪದಲ್ಲಿ ಆಶಾ ತಿಮ್ಮಪ್ಪ ಗೌಡ ಅವರನ್ನು ಪುತ್ತೂರು ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಹಾಗಾಗಿ ಮತದಾರ ಯಾವುದೇ ಗೊಂದಲಕ್ಕೆ ಒಳಗಾಗದೆ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.
ಪುತ್ತೂರಿನ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಅದ್ದೂರಿ ರೋಡ್‌ಶೋ ನಡೆಸಿ, ಕಿಲ್ಲೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಕ್ಷದ ಕಮಲ ಚಿಹ್ನೆಯಡಿ ಸ್ಪರ್ಧಿಸುವವರೇ ನಮ್ಮ ಅಧಿಕೃತ ಅಭ್ಯರ್ಥಿ. ಅವರ ಗೆಲುವೇ ಪಕ್ಷದ, ಹಿಂದುತ್ವದ ಗೆಲುವು ಎಂದ ಯೋಗಿ, ಪಕ್ಷ, ಸಿದ್ಧಾಂತ ನಂಬಿಕೊಂಡ ಕಾರ್ಯಕರ್ತೆ ಆಶಾ ತಿಮ್ಮಪ್ಪ ಅವರನ್ನು ಗೆಲ್ಲಿಸುವಂತೆ ಮತದಾರರ ಬಳಿ ವಿನಂತಿಸಿದರು.

Advertisement

ತುಳುನಾಡಿಗೆ ನಮನ
ಪುತ್ತೂರಿನ ಮುತ್ತಿನಂತಹ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಯೋಗಿ ಆದಿತ್ಯನಾಥ್‌ ಪರಶುರಾಮ ಸೃಷ್ಟಿಯ ತುಳುನಾಡಿಗೆ ಮೊದಲಾಗಿ ವಂದನೆ ಸಲ್ಲಿಸುತ್ತೇನೆ. ಅಯೋಧ್ಯೆಯ ಪುಣ್ಯದ ಭೂಮಿಯಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಉತ್ತರಪ್ರದೇಶದಲ್ಲಿರುವ ಅಯೋಧ್ಯೆಗೂ ಕರ್ನಾಟಕಕ್ಕೂ ಬಹಳ ಪ್ರಾಚೀನ ಕಾಲದಿಂದಲೂ ನಿಕಟ ಸಂಬಂಧವಿದೆ ಎಂದು ಸ್ಮರಿಸಿದರು.

ಬಜರಂಗಿ ಸ್ಮರಣೆ ಕಾಂಗ್ರೆಸ್‌ಗೆ ಟಾಂಗ್‌
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಆಗುತ್ತಿದೆ. ಶ್ರೀರಾಮ ಭಕ್ತ ಹನುಮಂತನ ಹುಟ್ಟೂರು ಕರ್ನಾಟಕವೇ ಆಗಿದ್ದು ಹನುಮನ ಮೂಲ ನೆಲೆಯ ಪುನರುತ್ಥಾನದ ಕಾರ್ಯ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಕಾಂಗ್ರೆಸ್‌ ಪಕ್ಷವು ರಾಮನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದೆ. ಭಜರಂಗದಳ ಸಂಘಟನೆಯನ್ನೇ ನಿಷೇಧಿಸುತ್ತೇವೆ ಎಂದು ಹೇಳುತ್ತಿದೆ. ತನ್ಮೂಲಕ ಆ ಪಕ್ಷವು ರಾಷ್ಟ್ರದ್ರೋಹಿಗಳಿಗೆ ಬೆಂಬಲ ಸೂಚಿಸುತ್ತಿದ್ದು ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಡಬಲ್‌ ಎಂಜಿನ್‌ ಸರಕಾರದಿಂದ ಅಭಿವೃದ್ಧಿ
ಪ್ರಧಾನಿ ಮೋದಿಯ ಆಡಳಿತದಲ್ಲಿ ದೇಶ ಸುಭಿಕ್ಷ, ಸುರಕ್ಷಿತವಾಗಿದೆ. ವಿಶ್ವದಲ್ಲಿಯು ಗುರುತಿಸಲ್ಪಟ್ಟಿದೆ. ಡಬಲ್‌ ಎಂಜಿನ್‌ ಸರಕಾರ ಇಂದಿನ ಅವಶ್ಯಕ. ಆದ್ದರಿಂದ ಈ ಬಾರಿಯ ಚುನಾವಣೆಯೂ ಕರ್ನಾಟಕ ವಿಕಾಸಕ್ಕಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ನಡೆಯುತ್ತಿದೆ. ಹಾಗಾಗಿ ಪುತ್ತೂರು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಘೋಷಿಸಿರುವ ಕಾಂಗ್ರೆಸ್‌, ಅವಸಾನದತ್ತ ಸಾಗಲಿದೆ. ಬಿಜೆಪಿ ವಿಜಯದತ್ತ ಸಾಗುತ್ತಿದ್ದು, ಪುತ್ತೂರಿನ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗೆಲ್ಲಲಿದ್ದಾರೆ. ಭಯೋತ್ಪಾದಕರ ಹುಟ್ಟಡಗಿಸಿದ ಯೋಗಿ ಆದಿತ್ಯನಾಥ್‌ ಅವರು ಪುತ್ತೂರಿಗರ ಆಶೀರ್ವಾದ ಪಡೆಯಲು ನಿಮ್ಮ ಮುಂದೆ ಬಂದಿದ್ದು ಕ್ಷೇತ್ರದಲ್ಲಿ ಅಪೂರ್ವ ಸ್ವಾಗತ ನೀಡಿದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

Advertisement

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತಯಾಚಿಸಿದರು. ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್‌ ರಾವ್‌ ವಂದಿಸಿದರು.

ರಸ್ತೆ ಇಕ್ಕೆಲಗಳಲ್ಲಿ ಕಿಕ್ಕಿರಿದ ಕಾರ್ಯಕರ್ತರು
ಪುತ್ತೂರು ನಗರದಲ್ಲಿ ರೋಡ್‌ ಶೋದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್‌ ಅವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಚೆಂಡೆವಾದನ, ಗೊಂಬೆ ಕುಣಿತದೊಂದಿಗೆ ಹೂ ಅರ್ಪಿಸುತ್ತಾ ದಾರಿಯುದ್ದಕ್ಕೂ ಮೆರವಣಿಗೆ ಸಾಗಿತ್ತು. ರಸ್ತೆ ಇಕ್ಕೆಲಗಳಲ್ಲಿ, ಕಟ್ಟಡಗಳಲ್ಲಿ ನೆರೆದಿದ್ದ ಸಾವಿರಾರು ಮಂದಿ ಕಾರ್ಯಕರ್ತರು ಯೋಗಿ ಅವರನ್ನು ಕಣ್ತುಂಬಿಕೊಂಡರು. ಈ ವೇಳೆ ಯೋಗಿ ಅವರು ಕೈ ಮುಗಿದು ಮತ ಯಾಚನೆ ಮಾಡಿದರು. ಶನಿವಾರದ ಯೋಗಿ ಆದಿತ್ಯನಾಥ್‌ ಅವರ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ನವೋಲ್ಲಾಸ ಮೂಡಿಸುವಲ್ಲಿ ಯಶ ಕಂಡಿತು.

Advertisement

Udayavani is now on Telegram. Click here to join our channel and stay updated with the latest news.

Next