ಮೂಡುಬಿದಿರೆ: ಚುನಾವಣೆಯ ದಿನ ಹಕ್ಕು ಚಲಾವಣೆಯ ಸ್ಫೂರ್ತಿಯಾಗಿ ಅನೇಕ ಚಿತ್ರಗಳು, ವೀಡಿಯೋಗಳು ಹರಿದಾಡಿರಬಹುದು. ಆದರೆ ನಿಜಕ್ಕೂ ಜ್ವಾಜ್ವಲ್ಯಮಾನವಾಗಿ ವೈರಲ್ ಆಗಿರುವುದು ಒಬ್ಬ ಬಸ್ ಚಾಲಕನ ವೀಡಿಯೋ!
ಚಲಾಯಿಸುತ್ತಿದ್ದ ಬಸ್ಸನ್ನೇ ಮತಗಟ್ಟೆಯ ಬಳಿ ನಿಲ್ಲಿಸಿ ಓಡಿ ಹೋಗಿ ಮತ ಚಲಾಯಿಸಿ ಬಂದು ಬಸ್ ಚಲಾಯಿಸಿದ ಖಾಸಗಿ ಬಸ್ ಚಾಲಕ ಬೆಳುವಾಯಿ ಕುಕ್ಕುಡೇಲು (ಕಾಂತಾವರ ಕ್ರಾಸ್) ನಿವಾಸಿ ವಿಜಯ ಶೆಟ್ಟಿ ಅವರ ಮಿಂಚಿನ ನಡವಳಿಕೆ ಇದು.
ಮತದಾನದ ಮಹತ್ವವನ್ನು ಸಾರುವ ಜತೆಗೆ ಮನೆಯಲ್ಲಿದ್ದೂ ಮತಗಟ್ಟೆಗೆ ಬಾರದೆ ಲೋಕೋಪದೇಶ ಮಾಡುವ “ಉದಾಶೀನಣ್ಣ’ನವರಿಗೆ ಇದೊಂದು ಪಾಠದಂತಿದೆ.
ಮಂಗಳೂರು -ಮೂಡುಬಿದಿರೆ -ಕಾರ್ಕಳ-ಶಿವಮೊಗ್ಗ ರೂಟ್‌ನಲ್ಲಿ ಮೂಡುಬಿದಿರೆ ಬೆಳುವಾಯಿ ಮೂಲಕ ಸಂಚರಿಸುವ ಎಕ್ಸ್‌ಪ್ರೆಸ್ ಬಸ್ಸಿನ ಚಾಲಕ 55ರ ಹರೆಯದ ವಿಜಯ ಶೆಟ್ಟಿ ಗುರುವಾರ ಸಂಜೆ 4.45ರ ವೇಳೆಗೆ ತಾನು ಮತ ಚಲಾಯಿಸಬೇಕಾಗಿದ್ದ ಬೆಳುವಾಯಿ ಚರ್ಚ್ ಬಳಿ ಶಾಲೆಯ ಬಳಿ ಬಸ್ ಚಲಾಯಿಸಿಕೊಂಡು ಬಂದರು. ಬಸ್ಸನ್ನು ಶಾಲೆಯ ಗೇಟಿನ ಮುಂಭಾಗ ನಿಲ್ಲಿಸಿದವರೇ ಓಡಿ ಹೋಗಿ ಎರಡೇ ನಿಮಿಷಗಳಲ್ಲಿ ಮತ ಚಲಾಯಿಸಿ ಮತ್ತೆ ಓಡಿ ಬಂದು ಮತ್ತೆ ಬಸ್ ಸ್ಟಿಯರಿಂಗ್ ವೀಲ್ ಹಿಡಿದರು!
“ಅದು ನಮ್ಮ ಹಕ್ಕು, ಬದುಕಿನ ಸಂಕೇತ’ ಎಂದು ವಿಜಯ ಶೆಟ್ಟಿ ಹೆಮ್ಮೆಯಿಂದ ಸಂತಸ ಹಂಚಿಕೊಂಡಿದ್ದಾರೆ.ಕಳೆದ ಪಂಚಾಯತ್ ಚುನಾವಣೆಯಲ್ಲೂ ಶೆಟ್ಟರು ಹೀಗೆಯೇಮತ ಚಲಾಯಿಸಿದ್ದರು. ಈ ಬಗ್ಗೆ ಸಂಪರ್ಕಿಸಿ ಮಾಹಿತಿ ಕೇಳಿದಾಗ, ಹಿಂದೆ ಭಟ್ಕಳ ಬಸ್‌ನಲ್ಲಿರುವಾಗ ಬೆಳಗ್ಗೆ ಬೇಗನೇ ಮತ
ದಾನ ಮಾಡಿ ಹೋಗಿದ್ದುದನ್ನು ನೆನಪಿಸಿಕೊಂಡರು.ಬೆಂಗಳೂರಿನಲ್ಲಿ ವಿಪ್ರೋ ಉದ್ಯೋಗಿಯಾಗಿರುವ ಶೆಟ್ಟರ ಪುತ್ರಿ ದೀಪಾ ಕೂಡ ಊರಿಗೆ ಬಂದು ಮತದಾನ ಮಾಡಿದ್ದಾರೆ.