ಮಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದು ಎ. 11ರಂದು ಆರಂಭವಾದ 7 ಹಂತಗಳ ದೀರ್ಘ ಚುನಾವಣಾ ಪ್ರಕ್ರಿಯೆ; ಪೂರ್ಣಗೊಂಡದ್ದು ಮೇ 19ರಂದು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದದ್ದು ಎ. 18ರಂದು. ಈಗ ಮೇ 23ಕ್ಕೆ ಚುನಾವಣೆಯ ಮತಗಣನೆ ಮತ್ತು ಫಲಿತಾಂಶ.
ದ.ಕನ್ನಡದಲ್ಲಿ 13 ಅಭ್ಯರ್ಥಿಗಳು ಕಣ ದಲ್ಲಿದ್ದಾರೆ. ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಅಭ್ಯರ್ಥಿಗಳ ಪಾಲಿಗೆ ಕಾಯುವಿಕೆಯ ತಪ. ಮತದಾರರ ಪಾಲಿಗೆ ತಾಪ! ಜಿಲ್ಲೆಯ ಉಷ್ಣಾಂಶ ಚುನಾವಣಾ ಕಾವಿನಂತೆ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಈಗ 4-5 ದಿನಗಳಿಂದ ಅಲ್ಲಲ್ಲಿ ಒಂದಿಷ್ಟು ಮಳೆಯಾಗಿ ತಾಪ ಕಡಿಮೆಯಾದಂತಿದೆ; ಮೇ 23ರಂದು ಮತಎಣಿಕೆಯ ದಿನ ಸಮೀಪಿಸುತ್ತಿದ್ದಂತೆಯೇ ಕುತೂಹಲ -ಉದ್ವೇಗ ತಾರಕಕ್ಕೇರುವ ಪರಿಸ್ಥಿತಿ.
ಈ ಬಾರಿ ಎನ್‌ಐಟಿಕೆ
ಈ ಬಾರಿ ದ.ಕನ್ನಡ ಲೋಕಸಭಾ ಕ್ಷೇತ್ರದ ಮತಗಣನೆ ಸುರತ್ಕಲ್ನ ಎನ್‌ಐಟಿಕೆಯಲ್ಲಿ ನಡೆಯಲಿದೆ. ಈ ಹಿಂದೆ, ಅಂದರೆ ಆಗಿನ ಮಂಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯ ಕೇಂದ್ರ ಕದ್ರಿಯ ಕೆಪಿಟಿ ಆಗಿತ್ತು. ಬಳಿಕ, ದ.ಕನ್ನಡ ಆದಾಗ ಬೊಂದೇಲ್ನ ಎಂಜಿಸಿ ಶಿಕ್ಷಣ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿತು. ಈ ಬಾರಿ ಭದ್ರತೆ ಇತ್ಯಾದಿ ಕಾರಣಕ್ಕೆ ಎನ್‌ಐಟಿಕೆ ಯನ್ನು ಆರಿಸಲಾಗಿದೆ.
ಹಾಗೆ ನೋಡಿದರೆ, ದೇಶದ ಚುನಾವಣಾ ಇತಿಹಾಸದಲ್ಲಿ ಇದು ಮತದಾನ ಹಾಗೂ ಮತ ಎಣಿಕೆಯ ಮಟ್ಟಿಗೆ ಮಂಗಳೂರು (ದ.ಕನ್ನಡ) ಲೋಕಸಭಾ ಕ್ಷೇತ್ರಕ್ಕೆ ಸುದೀರ್ಘ ಅಂತರ. ಪ್ರಪ್ರಥಮ ಸಾರ್ವತ್ರಿಕ ಚುನಾವಣೆ ದೇಶದಲ್ಲಿ 25-10-1951ರಿಂದ 21-2- 1952ರವರೆಗೆ ನಡೆದಿತ್ತು. 2014ರಲ್ಲಿ ದ.ಕನ್ನಡದಲ್ಲಿ ಚುನಾವಣೆ 17-4-2014; ಫಲಿತಾಂಶ 14-5-2014. ಈ ಬಾರಿ ಇಲ್ಲಿ ಒಂದು ತಿಂಗಳು 5 ದಿನಗಳ ಅಂತರ.