ಕಲಬುರಗಿ: ವಿಧಾನಸಭಾ ಚುನಾವಣೆ ಮತ ಎಣಿಕೆಗಾಗಿ ಒಟ್ಟು 485 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಬ್ಬಂದಿಗಳ ಎರಡನೇ ಹಂತದ ರ್‍ಯಾಂಡಮೈಸೇಶನ್ ಪ್ರಕ್ರಿಯೆ ಎಲ್ಲ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಕೈಗೊಂಡರು.
ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಮೇ 15ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ
ನಡೆಯಲಿದೆ. ಪ್ರತಿ ಮತಕ್ಷೇತ್ರಕ್ಕೆ ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗಾಗಿ ಪ್ರತಿ ಮತಕ್ಷೇತ್ರಕ್ಕೆ ತಲಾ 17 ಮತ ಎಣಿಕೆ ಸೂಪರವೈಸರ್, ತಲಾ 17 ಮತ ಎಣಿಕೆ ಅಸಿಸ್ಟಂಟ್‌ಗಳಂತೆ ಒಟ್ಟು 153 ಮತ ಎಣಿಕೆ ಸೂಪರವೈಸರ್ ಹಾಗೂ 153 ಮತ ಎಣಿಕೆ ಅಸಿಸ್ಟಂಟ್‌ಗಳನ್ನು ನೇಮಿಸಲಾಗಿದೆ. ಆಳಂದ ಹೊರತುಪಡಿಸಿ ಪ್ರತಿ ಮತಕ್ಷೇತ್ರಕ್ಕೆ ತಲಾ 20 ಮೈಕ್ರೋ ಅಬರ್ವರ್ ಹಾಗೂ ಆಳಂದ ಮತಕ್ಷೇತ್ರಕ್ಕೆ 19 ಮೈಕ್ರೋ ಅಬjರ್ವರ್‌ಗಳಂತೆ ಒಟ್ಟು 179 ಮೈಕ್ರೋ ಅಬjರ್ವರ್‌ಗಳನ್ನು ನೇಮಿಸಲಾಗಿದೆ.
ಮತ ಎಣಿಕೆಗೆ ನೇಮಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಈಗಾಗಲೇ ಎರಡು ಬಾರಿ ತರಬೇತಿ ನೀಡಲಾಗಿದೆ. ಅಂತಿಮವಾಗಿ ಮೇ 14ರಂದು ಮಧ್ಯಾಹ್ನ 3:00ಕ್ಕೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದು ಹೇಳಿದರು.
ತರಬೇತಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು. ಚುನಾವಣಾ ವೀಕ್ಷಕರಿಗೆ ನೇಮಿಸಲಾಗಿರುವ ಲೈಸನ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆಯಿಂದ ಮತ ಎಣಿಕೆ ಪ್ರಕ್ರಿಯೆ ಮಾರ್ಗಸೂಚಿ ಪಡೆದು ಚುನಾವಣಾ ವೀಕ್ಷಕರಿಗೆ ನೀಡಬೇಕು. ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿ ಅಂತಿಮ ರ್‍ಯಾಂಡಮೈಸೇಶನ್ ಇನ್ನೊಂದು ಹಂತದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಚುನಾವಣೆ ಸಾಮಾನ್ಯ ವೀಕ್ಷಕರಾದ ಮೋಹಿಂದರ್ ಪಾಲ್ ಅರೋರಾ, ರಶೀದ್ ಖಾನ್, ಸಂಜೀವಕುಮಾರ ಬೇಸರಾ, ಪಿ. ವೇಣುಗೋಪಾಲ, ಬ್ರಜ್ ಮೋಹನಕುಮಾರ, ಡಾ| ಆರ್. ರಾಜೇಶಕುಮಾರ, ಮತ ಎಣಿಕೆ ವೀಕ್ಷಕ ಸಿ. ಮುನಿನಾಥನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಎನ್‌ಐಸಿ ಅ ಧಿಕಾರಿ ಅವಧಾನಿ, ಎಲ್ಲ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು ಪಾಲ್ಗೊಂಡಿದ್ದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾ ಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ
ಮತ ಎಣಿಕೆ ಮಾಡಲು ಮತ ಎಣಿಕಾ ಕೇಂದ್ರ ಸಿದ್ಧಪಡಿಸಲಾಗುತ್ತಿದೆ.