ಕಾರವಾರ: ಮತ ಎಣಿಕೆ ಕೇಂದ್ರಕ್ಕೆ ಕಡ್ಡಾಯವಾಗಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ಹೇಳಿದ್ದಾರೆ.
ಜಿಲ್ಲಾದಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಅವರು ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಕಾರಣವಾಗಬಾರದು ಎಂಬ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮುಂಜಾಗೃತಾ ಕ್ರಮವಾಗಿ ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ರಾಜಕೀಯ ಪಕ್ಷಗಳ ಏಜೆಂಟರು ಹಾಗೂ ಅಭ್ಯರ್ಥಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯಲಿರುವ ಕುಮಟಾದ ಡಾ| ಎ.ವಿ. ಬಾಳಿಗ ಕಾಲೇಜಿನಲ್ಲಿನ ಸುತ್ತಲೂ 200 ಮೀಟರ್ ಅಳತೆಯಲ್ಲಿ ನಿಷೇಧಾಜ್ಞೆ ಇರಲಿದೆ. ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ಮೂರು ಹಂತದ ಭದ್ರತೆ ಇದ್ದು ಬೇರೆ ರಾಜ್ಯದ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿರುತ್ತದೆ. ಅವರಿಗೆ ಅಭ್ಯರ್ಥಿಯವರ ಪರಿಚಯ ಇಲ್ಲದಿರಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಆಯೋಗದಿಂದ ನೀಡಲಾಗುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿ ಪ್ರವೇಶಿಸಬೇಕು.
ಅಭ್ಯರ್ಥಿಗಳು ಮಾತ್ರ ಆಯಾ ಪಕ್ಷ ಅಧಿಕೃತ ಏಜೆಂಟರ್‌ಗಳು ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು ಬೇರೆ ಯಾವುದೇ ಜನಪ್ರತಿನಿಧಿಗಳು ಮುಖಂಡರಿಗೆ ಪ್ರವೇಶ ಇರುವುದಿಲ್ಲ. ಸಹಾಯಕ ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದ ಚುನಾವಣಾ ಏಜೆಂಟರಿಗೆ ಗುರುತಿನ ಚೀಟಿ ನೀಡಲು ಜವಾಬ್ದಾರಿ ನೀಡಲಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ವಿವರವನ್ನು ಸಲ್ಲಿಸಿ ಅವರು ಪಡೆದುಕೊಳ್ಳಬೇಕು ಹಾಗೂ ಸರಿಯಾಗಿ 8 ಗಂಟೆಗೆ ಮತ ಎಣಿಕೆ ಆರಂಭವಾಗುವುದರಿಂದ ಅದಕ್ಕೆ ಮುಂಚಿತವಾಗಿಯೇ ಅಭ್ಯರ್ಥಿ ಮತ್ತು ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು ಎಂದು ಅವರು ತಿಳಿಸಿದರು.
ಮೂರು ಸಾವಿರಕ್ಕೂ ಹೆಚ್ಚು ಅಂಚೆ ಮತಗಳು ಬಂದಿರುವುದರಿಂದ ಅಂಚೆ ಮತಗಳ ಎಣಿಕೆ ವಿಳಂಬವಾಗಬಹುದು. ಅಲ್ಲದೆ ವಿವಿ ಪ್ಯಾಟ್ ಮತ ಖಾತ್ರಿ ಚೀಟಿಗಳ ಎಣಿಕೆ ಕೂಡ ಆಗಬೇಕಿರುವುದರಿಂದ ಎಲ್ಲ ಮುಗಿದ ಬಳಿಕವೇ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಲಾಗುವುದು ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ವಿಶೇಷ ನಿಯಮಗಳನ್ನು ರಾಜಕೀಯ ಪಕ್ಷಗಳು ಪಾಲಿಸಬೇಕು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಆಯಾ ಪಕ್ಷಗಳ ಮುಖಂಡರು ತಮ್ಮ ಕಾರ್ಯಕರ್ತರಿಗೆ ಸ್ವಯಂ ನಿಯಂತ್ರಣ ಹೇರಬೇಕು ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಕಾರಿ ನಾಗರಾಜ್ ಸಿಂಗ್ರೇರ್ ಉಪಸ್ಥಿತರಿದ್ದರು.