ಮಹಾನಗರ: ಬಸ್‌ಗಳಲ್ಲಿ,ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆಯಲ್ಲಿ,ಕಿರಾಣಿ ಅಂಗಡಿಗಳಲ್ಲಿ,ಹೊಟೇಲ್‌ಗಳಲ್ಲಿ ಎಲ್ಲರ ಬಾಯಲ್ಲೂ ಒಂದೇ ಮಾತು “ಜಿಲ್ಲೆಡ್ ಏರ್ ಗೆಂದ್ಯೆರ್‌ಗೆ?(ಜಿಲ್ಲೆಯಲ್ಲಿ ಯಾರು ಗೆದ್ದರು?)’.
ಹೌದು, ಸುಮಾರು ಒಂದು ತಿಂಗಳಿನಿಂದ ಕಾತುರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲಕ್ಕೀಗ ತೆರೆ ಬಿದ್ದಿದೆ. ಸುರತ್ಕಲ್‌ನ ಎನ್‌ಐಟಿಕೆ ಅವರ ಣದಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗಳ ಮತ ಎಣಿಕೆ ನಡೆಯುತ್ತಿದ್ದರೆ, ಇತ್ತ ನಗರದಲ್ಲಿ ಯಾರು ಗೆಲ್ಲಬಹುದು ಎನ್ನುವ ಕುತೂ ಹಲ-ಕಾತರದಿಂದ ಫಲಿತಾಂಶದ ಬಗ್ಗೆ ಪರಸ್ಪರ ಮಾತು ವಿನಿಮಯ ಮಾಡಿಕೊಳ್ಳುತ್ತಿದ್ದ ಸನ್ನಿವೇಶ ಕಂಡುಬಂತು.
ಮತ ಎಣಿಕೆ ದಿನ ಮತದಾರರು ಏನು ಮಾಡುತ್ತಿದ್ದಾರೆ? ನಗರ ಜನಜೀವನ ಹೇಗಿದೆ ಎನ್ನುವುದನ್ನು ತಿಳಿಯಲು “ಸುದಿನ’ವು ನಗರ ದಲ್ಲಿ ಸುತ್ತಾಟ ನಡೆಸಿದಾಗ ಬಸ್ ನಿಲ್ದಾಣ, ಅಂಗಡಿ – ಮುಂಗಟ್ಟು ಸಹಿತ ಎಲ್ಲೆಡೆಯೂ ಜನರು ಫಲಿತಾಂಶದ ವಿಶೇಷತೆಯ ಬಗ್ಗೆ ಮಾತನಾಡುತ್ತಿದ್ದರು. ಕೆಲವು ಮಂದಿ ಮನೆಯಲ್ಲೇ ಕೂತು ಟಿವಿಯಲ್ಲಿ ಫಲಿತಾಂಶವನ್ನು ವೀಕ್ಷಿ ಸುತ್ತಿದ್ದರು. ಮೀನುಗಾರಿಕಾ ಬಂದರಿನಲ್ಲಿ ಪ್ರತಿ ದಿನ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಅದರ ಲ್ಲಿಯೂ ಬಂದರಿನಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಇದ್ದು, ತಮ್ಮ ತಮ್ಮ ರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.
ಸ್ಟೇಟ್‌ಬ್ಯಾಂಕ್ ಬಳಿ ಇರುವ ಮೀನು ಮಾರು ಕಟ್ಟೆಯಲ್ಲಿ ವ್ಯಾಪಾರ ಕುಸಿತ ಕಂಡುಬಂದಿತ್ತು. ಮೀನುಗಾರ ಮಹಿಳೆಯೊಬ್ಬರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, ಚುನಾವಣ ಫಲಿತಾಂಶ ಹಿನ್ನೆಲೆ ವ್ಯಾಪಾರ ವಹಿವಾಟು ಕುಗ್ಗಿದೆ. ಜನ ಸಂಚಾರ ವಿರಳವಾಗಿದೆ ಎಂದು ಹೇಳಿದರು.
ಚುನಾವಣ ಮತ ಎಣಿಕೆ ಹಿನ್ನೆಲೆಯಲ್ಲಿ ನಗರದ ಕಡೆಗೆ ಬರುವ ವಾಹನಗಳಿಗೆ ರಸ್ತೆಯನ್ನು ಮಾರ್ಪಾಡು ಮಾಡಲಾಗಿತ್ತು. ಈ ಕಿರಿಕಿರಿ ಬೇಡ ಎಂದು ಕೆಲವು ಮಂದಿ ಸಿಟಿಗೆ ಬರದೆ ಮನೆಯಲ್ಲೇ ಕೂತಿದ್ದರು. ಇದರಿಂದ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಇರಲಿಲ್ಲ. ಹಂಪನ ಕಟ್ಟೆಯಲ್ಲಿರುವ ಮಾರುಕಟ್ಟೆಯಲ್ಲಿ ಮತೆಣಿಕೆಯ ವಿಚಾರವೇ ಕೇಳಿಬರುತ್ತಿತ್ತು. ಹಲ ವಾರು ಅಂಗಡಿಗಳಲ್ಲಿ ಟಿ.ವಿ. ಚುನಾವಣ ಫಲಿ ತಾಂಶವನ್ನು ನೋಡುತ್ತಿದ್ದರು. ಗ್ರಾಹಕರು ಕೂಡ ಮಾಲಕರಲ್ಲಿ ಫಲಿತಾಂಶದ ಬಗ್ಗೆ ಮಾಹಿತಿ ಕೇಳುತ್ತಿದ್ದರು. ಇನ್ನು, ಯುವಜನತೆ ಹೆಚ್ಚಾಗಿ ಆನ್‌ಲೈನ್ ಮುಖೇನ ಲೈವ್ ಟಿವಿ, ವೀಕ್ಷಿ ಸುತ್ತಿದ್ದರು. ಅನೇಕರು ಫೇಸ್‌ಬುಕ್, ವಾಟ್ಸಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದರು.
ಬಸ್‌ಗಳಲ್ಲಿ ಜನ ಸಂಚಾರ ಕಡಿಮೆ
ಸ್ಟೇಟ್‌ಬ್ಯಾಂಕ್ ಸಿಟಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಸಹಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿಯೂ ಹೆಚ್ಚಿನ ಜನಸಂಖ್ಯೆ ಇರಲಿಲ್ಲ. ಸಿಟಿ, ಕೆಎಸ್ಸಾರ್ಟಿಸಿ ಬಸ್ ಸಂಚಾರ ಎಂದಿನಂತೆ ಇದ್ದರೂ, ಮಾಮೂಲಿ ದಿನಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು¤. ನಗರದ ಹೊಟೇ ಲ್ ಗಳಲ್ಲಿಯೂ ಜನ ಕಡಿಮೆ ಇತ್ತು. ಮಾಲ್‌ಗಳು, ಚಿತ್ರಮಂದಿರಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಜನ ಕಡಿಮೆ ಇದ್ದರು, ಸಂಜೆಯಾಗುತ್ತಿದ್ದಂತೆ ಎಂದಿನಂತೆ ವ್ಯಾಪಾರ ಇತ್ತು.
ಇಲ್ಲೂ ಮಂಡ್ಯದ್ದೇ ಮಾತು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಫಲಿತಾಂಶ ಏನಾಗುತ್ತದೆ ಎನ್ನುವ ಕುತೂಹಲದ ಜತೆಗೆ ಹೈಟೆನ್ಶನ್ ಸೃಷ್ಟಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆದ್ದರು ? ಎಂಬ ಕುತೂಹಲ ನಗರದಲ್ಲಿ ಕಂಡುಬಂತು. ಬಸ್‌ಗಳಲ್ಲಿ ಓಡಾಡುವ ಮಂದಿ ಈ ವಿಚಾರಗಳನ್ನು ಮಾತನಾಡುತ್ತಿದ್ದರು.