Advertisement

ಟ್ರೋಲ್‌ ಮೂಲಕವೂ ಮತ ಜಾಗೃತಿ!

06:56 PM Apr 15, 2019 | Lakshmi GovindaRaju |

ಬೆಂಗಳೂರು: ಚುನಾವಣಾ ವಿಷಯಗಳೇ ಟ್ರೋಲ್‌ ಆಗುತ್ತಿರುವ ಈ ಸಮಯದಲ್ಲಿ ಬೆಂಗಳೂರಿನ “ಪರಿಕ್ರಮ’ ಟ್ರೋಲ್‌ಪೇಜ್‌ ವಿಭಿನ್ನ ಪೋಸ್ಟ್‌ಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

Advertisement

ಪರಿಕ್ರಮ ತಂಡವು ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಕ್ರಿಯವಾಗಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಮೇಮ್ಸ್‌ ಸೃಷ್ಟಿಸುತ್ತಿದೆ.

“ಓಟ್‌ ಮಾಡಿ ಇಲ್ಲವಾದರೆ ಸಮಸ್ಯೆಗೆ ಸಿದ್ಧರಾಗಿ’ ಎನ್ನುವ ಟ್ರೋಲ್‌ಗ‌ಳ ಮೂಲಕ ಕಡ್ಡಾಯ ಮತದಾನ ಮಾಡುವುಕ್ಕೆ ಜಾಗೃತಿ ಮೂಡಿಸಲಾಗುತ್ತಿದೆ. “ನೋಟಾ’ ಚಲಾವಣೆಯ ಉದ್ದೇಶ, ಗುರುತಿನ ಚೀಟಿ ಇಲ್ಲದಿದ್ದರೆ ಬಳಸಬಹುದಾದ ದಾಖಲೆಯ ಬಗ್ಗೆಯೂ ಟ್ರೋಲ್‌ಪೇಜ್‌ನ ಮೂಲಕ ತಿಳಿಸಲಾಗುತ್ತಿದೆ.

ವಾಟ್ಸ್‌ಆ್ಯಪ್‌ನಲ್ಲಿ ಯುವಕರು “ಪರಿಕ್ರಮ’ ಗ್ರೂಪ್‌ ಮಾಡಿಕೊಂಡಿದ್ದು, ಇದರಲ್ಲಿ ಮತದಾನ ಜಾಗೃತಿ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಗುಂಪಿನಲ್ಲಿ ನಡೆದ ಚರ್ಚೆಯನ್ನು ಮತ್ತಷ್ಟು ಸ್ನೇಹಿತರಿಗೆ ತಲುಪಿಸಿ ಮತದಾನ ಜಾಗೃತಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ನಾಟಕಗಳ ಮೂಲಕ ಜಾಗೃತಿ: ಮೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ಕನ್ನಡದ “ಮಹಿಷಾಸುರ’ ಚಿತ್ರತಂಡ ಮತ್ತು ರಂಗಸಂಚಲನ ಕಲಾವಿದರು ಜಂಟಿಯಾಗಿ ಬೀದಿ ನಾಟಕಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

2018ರ ವಿಧಾನಸಭಾ ಚುನಾವಣೆ ಸಮಯದಲ್ಲೂ ರಂಗಸಂಚಲನ ತಂಡ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿತ್ತು. ನಟರಾಗಿ ಗುರುತಿಸಿಕೊಳ್ಳುತ್ತಿರುವ ಸುದರ್ಶನ್‌ ರಾವ್‌ ಮತ್ತು ತಂಡ ಮತದಾನ ಜಾಗೃತಿಯಲ್ಲಿ ತೊಡಗಿದೆ.

ಈ ಬಾರಿ “ಅತ್ಯುತ್ತಮ ಸರ್ಕಾರಕ್ಕಾಗಿ ಮರೆಯದೆ ಮತ ಚಲಾಯಿಸೋಣ’, “ಮತಪ್ರಜ್ಞೆ ಮತಿವಂತ ಪ್ರಜ್ಞೆ’ ಮತ್ತು “ಓಟ್‌ ಫ‌ರ್‌ ಚೇಂಜ್‌’ ಎನ್ನುವ ಘೋಷವಾಕ್ಯಗಳೊಂದಿಗೆ ಉದ್ಯಾನ, ಮಾರುಕಟ್ಟೆ, ಬಸ್‌ ನಿಲ್ದಾಣ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಓಟ್‌ ಮಾಡಿದರೆ ವಿದ್ಯಾರ್ಥಿವೇತನ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರೆ, ಉಜ್ವಲ ಅಕಾಡೆಮಿಯಿಂದ 10 ಸಾವಿರ ರೂ. ವಿದ್ಯಾರ್ಥಿವೇತನ ಪಡೆಯಬಹುದು!

ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುತ್ತಿರುವ ಯುವ ಜನರನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಉಜ್ವಲ ಅಕಾಡೆಮಿ ಈ ಕಾರ್ಯಕ್ರಮ ಆಯೋಜಿಸಿದೆ. ಮತದಾನ ಮಾಡಿದ ಗುರುತು ತೋರಿಸಿ ನೋಂದಣಿ ಮಾಡಿಸಿದ 10 ಮಂದಿಗೆ ಗರಿಷ್ಠ 10 ಸಾವಿರ ರೂ., 20 ಮಂದಿಗೆ 8 ಸಾವಿರ, 30 ಮಂದಿಗೆ 6 ಸಾವಿರ ಹಾಗೂ 40 ಮಂದಿಗೆ 4 ಸಾವಿರ ರೂ. ವಿದ್ಯಾರ್ಥಿವೇತನ ನೀಡಲು ಅಕಾಡೆಮಿ ನಿರ್ಧರಿಸಿದೆ.

ಫ‌ಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಹಾಗೇ, 10 ಸಾವಿರ ರೂ. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಎಎಸ್‌ ಪರೀಕ್ಷೆಗೆ 4 ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ.

ಆಸಕ್ತರು ಏ.27ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಏ.28ರಂದು ಸಂಜೆ 5 ಗಂಟೆಗೆ ಲಾಟರಿ ಎತ್ತಲಾಗುವುದು. ಮಾಹಿತಿಗಾಗಿ ಉಜ್ವಲ ಅಕಾಡೆಮಿ, ನಂ.3039/2, 14ನೇ ಎ ಮುಖ್ಯರಸ್ತೆ, ವೆಸ್ಟ್‌ ಆಫ್ ಕಾರ್ಡ್‌ ರಸ್ತೆ, ಆರ್‌ಪಿಸಿ ಲೇಔಟ್‌, ವಿಜಯನಗರ, ಬೆಂಗಳೂರು- 560 040. ಮೊ. 77959 59079 ಅಥವಾ 88843 34488 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next