Advertisement

ಮದುವೆ ಪತ್ರಿಕೆಯಲ್ಲಿ ಮತ ಜಾಗೃತಿ

11:50 PM Apr 08, 2019 | sudhir |

ಕುಂದಾಪುರ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾಮ ಸಂವತ್ಸರ, ವಧು – ವರರ ಹೆಸರು, ವಿವಾಹ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎನ್ನುವ ಸಂದೇಶವಿರಬಹುದು. ಆದರೆ ಇಲ್ಲೊಂದು ಆಮಂತ್ರಣ ಪತ್ರಿಕೆ ವಿನೂತನವೆನ್ನುವಂತೆ ಈ ಬಾರಿಯ ಲೋಕಸಭಾ ಚುನಾವಣೆಯ ಕುರಿತು ಮತಜಾಗೃತಿ ಮೂಡಿಸುವಂತಿದೆ.

Advertisement

ಮೇ 1 ರಂದು ತಲ್ಲೂರು ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆಷನ್‌ ಸಭಾಭವನದಲ್ಲಿ ನಡೆಯುವ ಗೌರಿ – ಶ್ರೀನಿವಾಸ್‌ ದಂಪತಿ ಪುತ್ರ ಗಣೇಶ್‌ ಕುಮಾರ್‌ ಪಡುಕೋಣೆ ಹಾಗೂ ಲೀಲಾವತಿ – ನಾರಾಯಣ ಅವರ ಪುತ್ರಿ ಪೂರ್ಣಿಮಾ ಅವರ ವಿವಾಹ ಆಮಂತ್ರಣ ಪತ್ರಿಕೆಯು ಈ ಮತದಾನದ ಕುರಿತ ಜಾಗೃತಿ ಸಂದೇಶ ನೀಡುವ ಮೂಲಕ ಗಮನಸೆಳೆದಿದೆ.

ಒಂಚೂರು ಇಲ್ಕಾಣಿ..
ಆಮಂತ್ರಣ ಪತ್ರಿಕೆಯಲ್ಲಿ ಒಂಚೂರು ಇಲ್ಕಾಣಿ ಎನ್ನುತ್ತಾ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ ನಮ್ಮ ಮತ ಮಾರಾಟಕ್ಕಿಲ್ಲ ಎನ್ನುವ ಸಂದೇಶವಿದೆ. ಅಷ್ಟೇ ಅಲ್ಲ, ಮದುವೆಗೆ ಬಂದವರು ವಧು – ವರರಿಗೆ ಯಾವುದೇ ಉಡುಗೊರೆ ನೀಡುವಂತಿಲ್ಲ, ಆದರೆ ನೀವು ಓಟು ಹಾಕಿದ್ದರೆ ನಿಮಗೊಂದು ವಿಶೇಷ ಉಡುಗೊರೆ ಕಾದಿದೆ ಎನ್ನುವ ಮಾಹಿತಿಯಿದೆ. ಮತದಾನ ಮಾಡಿದ ಬಗ್ಗೆ ಬೆರಳಿನ ಶಾಯಿ ಗುರುತು ತೋರಿಸಿದವರಿಗೆ ಪುಸ್ತಕ ಉಡುಗೊರೆ ರೂಪದಲ್ಲಿ ಸಿಗಲಿದೆ ಅಂತೆ.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮಿತಿ ಕೈಗೊಳ್ಳುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳೊಂದಿಗೆ, ಸಾರ್ವಜನಿಕರೂ ಮತ ಜಾಗೃತಿ ಮೂಡಿಸುವ ಮೂಲಕ ಮಾದರಿಯೆನಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next